ಜಿಲ್ಲೆ

ಮಸ್ತೇನಹಳ್ಳಿಗೆ ಅಧಿಕಾರಿಗಳ ತಂಡ ಭೇಟಿ : 6 ಮಂದಿಗೆ ಕರೊನಾ ಸೋಂಕು ಹಿನ್ನೆಲೆಯಲ್ಲಿ ಪರಿಶೀಲನೆ

Chikkaballapur

ಚಿಂತಾಮಣಿ: ತಾಲೂಕಿನ ಕೈವಾರ ಪ್ರ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮಸ್ತೇನಹಳ್ಳಿಯಲ್ಲಿ ಒಂದೇ ಮನೆಯಲ್ಲಿ 6 ಮಂದಿಗೆ ಕರೊನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಹಿರಿಯ ಆರೋಗ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಗರ ಹಾಗೂ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕು ಕಡಿಮೆಯಾಗಿತ್ತು. ಆದರೆ, ಗ್ರಾಮದ ಕುಟುಂಬವೊಂದಕ್ಕೆ ತಪಾಸಣೆ ವಾಡಿದಾಗ 6 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಹಾಗಾಗಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದಿರಾ ಕಬಾಡೆ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೆಟಿ ನೀಡಿ ಸೋಂಕಿತ ಮನೆಯವರೊಂದಿಗೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದರು.

6 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಅಲ್ಪ ಪ್ರಮಾಣದ ರೋಗ ಲಕ್ಷಣಗಳು ಕಂಡುಬಂದಿರುವುದು ತಂಡಕ್ಕೆ ನೆಮ್ಮದಿ ತಂದಿದೆ. ಯಾವುದೇ ಸಮಸ್ಯೆ ಕಂಡುಬಂದಲ್ಲಿ ವೈದ್ಯರ ಗಮನಕ್ಕೆ ತರುವಂತೆ ಅಧಿಕಾರಿಗಳು ಸೂಚಿಸಿದಲ್ಲದೆ, ಮನೆಯಲ್ಲಿನ ಸೋಂಕಿತ ಹಿರಿಯರ ಮೇಲೆ ನಿಗಾ ಇಡಲು ಮೂವರನ್ನು ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಕೇಂದ್ರಕ್ಕೆ ಸೋಮವಾರ ದಾಖಲಿಸಲಾಗಿದೆ.

ಇನ್ನು ಗ್ರಾಮಕ್ಕೆ ಜಿಲ್ಲಾ ಪ್ರಭಾರ ಸರ್ವೇಕ್ಷಣಾಧಿಕಾರಿ ಎಲ್.ಅರ್ ರಮೇಶ್ ಬಾಬು, ಜಿಲ್ಲಾ ಅರ್.ಸಿ. ಎಚ್ ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವ್ಯಾ, ತಾಲೂಕು ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಒಮಿಕ್ರಾನ್ ಸೋಂಕು ಇಲ್ಲ : ದಕ್ಷಿಣ ಆಫ್ರಿಕಾದಿಂದ ಇತ್ತೀಚೆಗೆ ಶಿಡ್ಲಟ್ಟ ತಾಲೂಕಿಗೆ ಬಂದಿದ್ದ ಚಾಲಕ ಚಿಂತಾಮಣಿಯಲ್ಲಿ ಕರೊನಾ ಟೆಸ್ಟ್ ವಾಡಿಸಿದ್ದು, ನೆಗೆಟಿವ್ ವರದಿ ಬಂದಿದೆ. ಆದರೆ ಆತನಿಗೆ ಒಮಿಕ್ರಾನ್ ಸೋಂಕು ಇದೆ ಎಂಬ ಸುದ್ದಿ ಜಿಲ್ಲೆ ಮತ್ತು ತಾಲೂಕಿನಾದ್ಯಂತ ದಟ್ಟವಾಗಿ ಹಬ್ಬಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ಚಿಂತಾಮಣಿಯಲ್ಲಿ ಒಮಿಕ್ರಾನ್ ಸೋಂಕು ಹರಡಿಲ್ಲ, ಗಾಳಿ ವಾತುಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.