ಜಿಲ್ಲೆ

ಬಾಲಕಿಯರ ವಸತಿ ನಿಲಯಕ್ಕೆ ಅಧಿಕಾರಿಗಳ ಭೇಟಿ

ವೀರೇಶ ಸೌದ್ರಿ

ಸಿದ್ದಾಪುರ: ನೀರಿನ ಸಮಸ್ಯೆ ಎದುರಿಸುತ್ತಿರುವ ಪಟ್ಟಣದ ಬಾಲಕಿಯರ ವಸತಿ ನಿಲಯಕ್ಕೆ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹಾಗೂ ಪಪಂ ಮುಖ್ಯಾಧಿಕಾರಿ ಜೈರಾಮ ನಾಯ್ಕ ಅವರು ಶುಕ್ರವಾರ ಭೇಟಿ ನೀಡಿ ಪರಿಶಿಲಿಸಿದರು.

ವಸತಿ ನಿಲಯದಲ್ಲಿ ಬೋರ್‌ವೆಲ್ ಇದ್ದು, ಕಳೆದ ಹಲವು ದಿನಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ . ನಿತ್ಯ ಬಳಕೆಗೆ ಬೇಕಾಗುವಷ್ಟೂ ನೀರು ಲಭ್ಯವಾಗುತ್ತಿಲ್ಲವಾದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಈಗಾಗಲೇ ಪಪಂನಿಂದ ನೀರಿನ ವ್ಯವಸ್ಥೆ ಮಾಡಿದ್ದರೂ ಸಾಲುತ್ತಿಲ್ಲ. ವಸತಿ ನಿಲಯದಲ್ಲಿ 186ವಿದ್ಯಾರ್ಥಿನಿಯರಿದ್ದಾರೆ. ನೀರಿನ ತೊಂದರೆ ಇರುವುದರಿಂದ ಹಿತಮಿತವಾಗಿ ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ವಸತಿ ನಿಲಯದ ತಾಲೂಕು ಕಲ್ಯಾಣಾಧಿಕಾರಿ ಆಶಾ ಬೇಗಂ ಹೇಳಿದರು.
ಜೈರಾಮ ನಾಯ್ಕ ಪ್ರತಿಕ್ರಿಯಿಸಿ, ಪಪಂನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ಕಂಟ್ರೋಲ್ ವಾಲ್ವ್ ಅಳವಡಿಸಲಾಗುವುದು ಎಂದು ಹೇಳಿದರು.

ಬಾಲಕಿಯರ ವಸತಿ ನಿಲಯಕ್ಕೆ ಪಪಂನಿಂದ ನೀರಿನ ವ್ಯವಸ್ಥೆ ಮಾಡಬೇಕು. ಅಲ್ಲದೆ, ಬೋರ್‌ವೆಲ್‌ನ ಸ್ಥಿತಿ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗುವುದು.I ಎಂ.ಆರ್. ಕುಲಕರ್ಣಿ, ತಹಸೀಲ್ದಾರ್