ಬೇಲೂರು ಪಟ್ಟಣದ ತಾಲೂಕು ಕಚೇರಿ ಆವರಣ ಸಾಲುಮರದ ತಿಮ್ಮಕ್ಕ ನೆಟ್ಟಿದ ಗಿಡಗಳನ್ನು ಕಿತ್ತು ಹಾಕಲಾಗಿದೆ ಎಂದು ಆರೋಪಿಸಿ ಕಿತ್ತಿರುವ ಗಿಡವನ್ನು ತೋರಿಸಿದ ಬಳ್ಳೂರು ಉಮೇಶ್. 
ಜಿಲ್ಲೆ

ಸಾಲು ಮರದ ತಿಮ್ಮಕ್ಕ ನೆಟ್ಟ ಗಿಡ ಕಿತ್ತ ಅಧಿಕಾರಿಗಳು

ಶಿವಶಂಕರ್ ಎಂ. ಹೆಬ್ಬಳ್ಳ

ಬೇಲೂರು : ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕೆಲ ವರ್ಷಗಳ ಹಿಂದೆ ಸಾಲುಮರದ ತಿಮ್ಮಕ್ಕ ನೆಟ್ಟಿದ್ದ ಗಿಡಗಳನ್ನು ಕಿತ್ತು ಹಾಕಲಾಗಿದೆ ಎಂದು ಸಾಲು ಮರದ ತಿಮ್ಮಕ್ಕ ಫೌಂಡೇಷನ್ ಅಧ್ಯಕ್ಷ ಬಳ್ಳೂರು ಉಮೇಶ್ ಆರೋಪಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಸಾಲುಮರದ ತಿಮ್ಮಕ್ಕ ಅವರು ತಾಲೂಕು ಕಚೇರಿ ಆವರಣದಲ್ಲಿ ನೇರಳೆ ಸೇರಿದಂತೆ ಸಾಕಷ್ಟು ಗಿಡಗಳನ್ನು ನೆಟ್ಟಿದ್ದರು. ಕೆಲ ಗಿಡಗಳು ಬೆಳೆಯದ ಕಾರಣ ಎರಡು ವರ್ಷಗಳ ಹಿಂದೆ ಮತ್ತೆ ಗಿಡಗಳನ್ನು ನೆಡಲಾಗಿತ್ತು. ಆದರೆ ಬುಧವಾರ ಗಿಡಗಳನ್ನು ಕಿತ್ತು ಹಾಕಲಾಗಿದೆ ಎಂದು ದೂರಿದರು.

ತಹಸೀಲ್ದಾರ್‌ರನ್ನು ಕೇಳಿದರೆ ಜಾಗವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಉಡಾಫೆ ಉತ್ತರ ನೀಡಿದರು. ಸರ್ಕಾರ ಮತ್ತು ಅರಣ್ಯ ಸಚಿವರು ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ, ಜತೆಗೆ ಅರಣ್ಯ ಒತ್ತುವರಿ ತೆರವುಗೊಳಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಗಿಡಗಳನ್ನು ಕಿತ್ತು ಹಾಕಿರುವುದು ಸರಿಯಲ್ಲ. ಈ ವಿಷಯವನ್ನು ಶಾಸಕರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದ್ದು, ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಅರಣ್ಯ ಸಚಿವರು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವುದು ಎಂದರು.

ಈ ಸಂಬಂಧ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ತಾಲೂಕು ಕಚೇರಿ ಆವರಣದಲ್ಲಿ ಬೇಡವಾದ ಗಿಡಗಂಟಿಗಳು ಹುಲುಸಾಗಿ ಬೆಳೆದಿದ್ದವು. ಜತೆಗೆ ಇಲ್ಲಿ ಜನ ಮಲಮೂತ್ರ ವಿಸರ್ಜನೆಗೆ ಹೋಗುತ್ತಿದ್ದರಿಂದ ಕಚೇರಿ ಅಕ್ಕಪಕ್ಕದ ಮನೆಗಳ ಜನ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಿಡಗಂಟಿಗಳು ಬೆಳೆದಿದ್ದ ಜಾಗದಲ್ಲಿ ಪಾರ್ಕಿಂಗ್, ಉದ್ಯಾನ ನಿರ್ಮಿಸಿ ಜನರು ಕೂರಲು ವ್ಯವಸ್ಥೆ ಮಾಡಲು ಸ್ವಚ್ಛಗೊಳಿಸಲಾಗಿದೆ. ಈ ಸಂದರ್ಭ ನೇರಳೆ, ಇತರ ಗಿಡಗಳನ್ನು ಹಾಗೆಯೇ ಬಿಡಲಾಗಿದೆ, ಯಾವುದೇ ಗಿಡ ತೆರವುಗೊಳಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.