ಮೈಸೂರು: ನಿಷ್ಠಾವಂತ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಉಳಿಗಾಲವಿಲ್ಲ. ಈಗಾಗಲೇ ಇವರ ಕಿರುಕುಳದಿಂದ ಹಲವಾರು ಅಧಿಕಾರಿಗಳು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಾವೇ ಫ್ರೀ ಎನ್ನುವಂತಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಪಾದಯಾತ್ರೆ ಸಮಾರೋಪದಲ್ಲಿ ಅವರು ಮಾತನಾಡಿದರು.
ಸರ್ಕಾರ ನೀಡುತ್ತಿರುವ ಕಿರುಕುಳದಿಂದ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ಪಿ.ಚಂದ್ರಶೇಖರನ್ ಅವರ ಆತ್ಮಹತ್ಯೆಯಿಂದ 150 ಕೋಟಿ ರೂ. ಹಗರಣ ಹೊರ ಬಂದಿದೆ. ಸಬ್ ಇನ್ಸ್‌ಪೆಕ್ಟರ್ ಪರಶುರಾಮ ಸಾವಿನಿಂದ ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು ಭಾಗಿಯಾಗಿರುವುದು ಸಾಬೀತಾಗಿದೆ. ಈ ಸರ್ಕಾರದಲ್ಲಿ ಎಲ್ಲ ಫ್ರೀ ಎನ್ನುವಂತೆ ಸಾವೂ ಫ್ರೀ ಅಗಿದೆ ಎಂದರು.
ಡಿ.ಕೆ.ಶಿವಕುಮಾರ್ ಬೇರೆಯವರ ಆಸ್ತಿ ಎಷ್ಟು ಎಂದು ಕೇಳುತ್ತಾರೆ. ಅವರು 10 ವರ್ಷಗಳಲ್ಲಿ ತಮ್ಮ ಆಸ್ತಿ ಎಷ್ಟುಪಟ್ಟು ಹೆಚ್ಚಾಗಿದೆ ಎಂಬುದರ ಬಗ್ಗೆ ಉತ್ತರ ನೀಡಲಿ. ದಲಿತರ ಹೆಸರು ಹೇಳಿಕೊಂಡು ಸಿದ್ದರಾಮಯ್ಯ ದಲಿತರ ಆಸ್ತಿಗಳನ್ನು ನುಂಗಿದ್ದಾರೆ. ದಲಿತರ ಹಣವನ್ನು ಲೂಟಿ ಮಾಡಿದ್ದಾರೆ. ಇದಕ್ಕೆ ವಾಲ್ಮೀಕಿ ಹಗರಣವೇ ಸಾಕ್ಷಿ ಎಂದು ಕುಟುಕಿದರು.
ಮುಡಾದಲ್ಲಿ ಬದಲಿ ನಿವೇಶನ ಪಡೆದಿರುವ ಜಾಗವನ್ನು ದಲಿತರಿಂದ ಕಬಳಿಸಲಾಗಿದೆ. 3.16 ಎಕರೆ ಜಮೀನನ್ನು ಒಂದು ರೂಪಾಯಿಗೆ ತೆಗೆದುಕೊಳ್ಳಲಾಗಿದೆ. ಸಿದ್ದರಾಮಯ್ಯ ಅವರ ಬಾಮೈದ 5 ಲಕ್ಷ ರೂ.ಗೆ ಭೂಮಿ ತೆಗೆದುಕೊಂಡಿದ್ದರೆ, ಸಿದ್ದರಾಮಯ್ಯ ಈಗ 62 ಕೋಟಿ ರೂ.ಕೇಳುತ್ತಿದ್ದಾರೆ. ದಲಿತರ ಜಮೀನು ಲೂಟಿ ಮಾಡಿ ನಾನು ಕ್ಲೀನ್ ಕ್ಲೀನ್ ಎನ್ನುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ದಲಿತರ ಹೆಸರು ಹೇಳುವ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ದಲಿತರಿಗಾಗಿ ಮೀಸಲಿಟ್ಟ ಹಣವೆಲ್ಲವನ್ನು ತಿಂದು ತೇಗಿದ್ದಾರೆ. ವಾಲ್ಮೀಕಿ ನಿಗಮದಲ್ಲಿ 89 ಕೋಟಿ ರೂ. ಹಗರಣವಾಗಿದೆ ಎಂದು ಸದನದಲ್ಲಿಯೇ ಒಪ್ಪಿಕೊಂಡಿದ್ದಾರೆ. ಮುಡಾ ಹಗರಣದಲ್ಲಿಯೂ ದಲಿತರಿಗೆ ಸೇರಿದ ಜಮೀನನ್ನು ಕಬಳಿಸಿದ್ದಾರೆ. ಇಂತವರಿಗೆ ದಲಿತರ ಉದ್ದಾರ ಸಾಧ್ಯವೇ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಭೈರತಿ ಬಸವರಾಜು, ಬಿ.ಶ್ರೀರಾಮುಲು, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ ಇತರರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬಿ.ವೈ.ರಾಘವೇಂದ್ರ, ಮಾಜಿ ಸಚಿವರಾದ ಸಿ.ಟಿ.ರವಿ, ಗೋಪಾಲಯ್ಯ, ಮುನಿರತ್ನ, ಡಿ.ಸಿ.ತಮ್ಮಣ್ಣ, ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ್, ರೇಣುಕಾಚಾರ್ಯ, ಶಾಸಕರಾದ ಟಿ.ಎಸ್.ಶ್ರೀವತ್ಸ, ಎ.ಮಂಜು, ಮಾಜಿ ಶಾಸಕ ಎಲ್.ನಾಗೇಂದ್ರ ಇತರರು ಇದ್ದರು.