ಬಂಗಾರಪೇಟೆ: ನಗರೀಕರಣ ಬೆಳೆದಂತೆ ತಾಲೂಕಿನಲ್ಲಿ ಭೂ ಮಾಫಿಯದವರ ಕಾರುಬಾರು ಹೆಚ್ಚಾಗಿದ್ದು, ಸಿಕ್ಕಸಿಕ್ಕ ಸರ್ಕಾರಿ ಜಾಗಗಳನ್ನು ಕಬಳಿಸಲು ಮುಂದಾಗಿದ್ದಾರೆ. ಆದರೆ ಸರ್ಕಾರಿ ಜಮೀನು ರಕ್ಷಣೆ ಮಾಡಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ. ಇವರ ನಡವಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕುಪೇಂದ್ರ ಆರೋಪಿಸಿದರು.
ಭೂಮಾಫಿಯಾ ತಡೆಗೆ ತಾಲೂಕು ಆಡಳಿತ ಕಚೇರಿಯಲ್ಲಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ರಾರ್ಬಟ್ ಸನ್ ಪೇಟೆ ಹೋಬಳಿ, ಕಾಮಸಮುದ್ರ ಮುಖ್ಯರಸ್ತೆಯಲ್ಲಿರುವ ಕೆಸರಿನ ಹಳ್ಳಿ ಗ್ರಾಮದ ಸರ್ವೇ ನಂ.134/2ರಲ್ಲಿ 2 ಎಕರೆ 31 ಗುಂಟೆ ಜಮೀನಿದ್ದು, ಅದರಲ್ಲಿ ಶೇಖ್ ಅಬ್ದುಲ್ ಎಂಬುವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ.
ಈ ಬಗ್ಗೆ ರಾಜಸ್ವ ನಿರೀಕ್ಷಕರು, ಕಾರ್ಯದರ್ಶಿಗಳಿಗೆ ಮಾಹಿತಿ ಇದ್ದರೂ ಕ್ರಮವಹಿಸಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ವಾರದೊಳಗೆ ಒತ್ತುವರಿ ತೆರವುಗೊಳಿಸದಿದ್ದರೆ ತಾಲೂಕು ಆಡಳಿತ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.