ರೋಣ: ಕೃಷಿ ಇಲಾಖೆ ಪಕ್ಷದ ಕಚೇರಿಯಲ್ಲ. ಕೃಷಿ ಅಧಿಕಾರಿಗಳು ರೈತರ ಪರ ಕೆಲಸ ಮಾಡಬೇಕು. ಅದನ್ನು ಬಿಟ್ಟು ಪಕ್ಷದ ಏಜೆಂಟರಂತೆ ವರ್ತಿಸಿದರೆ ಪ್ರತಿಭಟನೆ ಮಾಡಲಾಗುವುದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ ಹೇಳಿದರು.
ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸಬೇಕು ಎಂದು ಒತ್ತಾಯಿಸಿ ಸೂಡಿ ವೃತ್ತದಿಂದ ಕೃಷಿ ಇಲಾಖೆ ಕಚೇರಿಯವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಮಾತನಾಡಿದರು.
ರೈತರಿಗೆ ಸಮರ್ಪಕ ಯೂರಿಯಾ ಗೊಬ್ಬರ ಪೂರೈಸಬೇಕು. ಈ ವರ್ಷ ಮುಂಗಾರು ಬಹುಬೇಗ ಆರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದರೂ ಸರ್ಕಾರ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡಿಲ್ಲ. ಕೇಂದ್ರ ಸರ್ಕಾರ ಸರಿಯಾಗಿ ಗೊಬ್ಬರ ಪೂರೈಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಆರೋಪ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದಿಂದ ಆಮದು ಆದ ಗೊಬ್ಬರದ ಅಂಕಿ- ಸಂಖ್ಯೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಕೆ. ಚವ್ಹಾಣ ಮಾತನಾಡಿ, ರಾಜ್ಯದಲ್ಲಿ ಹಿಂದೆಂದೂ ಆಗದಂತಹ ರಸಗೊಬ್ಬರದ ಕೊರತೆಯಾಗಿದೆ. ಎಲ್ಲೆಡೆ ಹಗಲೂ ರಾತ್ರಿ ಎನ್ನದೆ ರೈತರು ಗೊಬ್ಬರಕ್ಕಾಗಿ ಸರತಿ ನಿಲ್ಲುತ್ತಿದ್ದಾರೆ. ಇದರಿಂದ ಕೃಷಿ ಕೆಲಸಕ್ಕೆ ಅಡಚಣೆಗಳಾಗುತ್ತಿವೆ ಎಂದರು.
ರೋಣ ಮಂಡಲ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಒಂದು ಕಡೆ 2000 ರೂ. ಕೊಟ್ಟು ಮತ್ತೊಂದು ಕಡೆ 5000 ರೂ. ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೆರವಣಿಗೆಯು ಮುಲ್ಲಾನಬಾವಿ ಕ್ರಾಸ್, ಪೋತರಾಯನಕಟ್ಟೆ ಮೂಲಕ ಸಾಗಿ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಸಮಾಪ್ತಿಗೊಂಡಿತು. ನಂತರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಫ್. ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ರವಿ ದಂಡಿನ, ಶಿವಾನಂದ ಮಠದ, ಮಲ್ಲು ಕುರಿ, ಮಲ್ಲು ಮಾದರ, ಬಸವರಾಜ ಕೊಟಗಿ, ಶಿವಾನಂದ ಜಿಡ್ಡಿಬಾಗಿಲ, ಅನೀಲ ಪಲ್ಲೇದ, ಬಸವರಾಜ ರಂಗನಗೌಡ್ರ, ಸಂತೋಷ ಕಡಿವಾಲ, ಅಶೋಕ ಪವಾಡ ಶೆಟ್ಟರ, ಇಂದಿರಾ ತೇಲಿ, ಲಲಿತಾ ಮಾರನಬಸರಿ, ಸುಜಾತ ಪ್ರಧಾನಿ, ರಮೇಶ ಒಕ್ಕರ, ಬಾಲಾಜಿರಾವ್ ಬೋಸಲೆ, ಶರಣಪ್ಪ ಪ್ಯಾಟಿ, ಭೀಮಪ್ಪ ಮಾದರ, ರೋಣ, ಗಜೇಂದ್ರಗಡ ತಾಲೂಕು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.