ಶ್ರೀರಂಗಪಟ್ಟಣದ ತಾಲೂಕು ಕಚೇರಿಗೆ ಬುಧವಾರ ಆಗಮಿಸಿದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಸರ್ಕಾರದ ವಿವಿಧ ಸೌಲಭ್ಯಗಳ ಮಾಸಾಶನದ ಫಲಾನುಭವಿಗಳಿಗೆ ಎದುರಾಗಿರುವ ಸಮಸ್ಯೆ ಬಗೆಹರಿಸುವಂತೆ ಗ್ರೇಡ್2 ತಹಸೀಲ್ದಾರ್ ಚೈತ್ರಾ ಅವರಿಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ಅನಗತ್ಯ ದಾಖಲೆಗೆ ಅಧಿಕಾರಿಗಳ ಒತ್ತಡ

ವಸಂತಕುಮಾರ್ ಬಿ

ಶ್ರೀರಂಗಪಟ್ಟಣ: ವಿವಿಧ ಯೋಜನೆಗಳ 60 ವರ್ಷ ಮೇಲ್ಪಟ್ಟ ಫಲಾನುಭವಿಗಳು ತಮ್ಮ ಪಿಂಚಣಿ ಮುಂದುವರೆಸಲು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಒದಗಿಸುವಂತೆ ಸಲ್ಲದ ಕಿರುಕುಳ ನೀಡಿ ತಾಲೂಕು ಅಧಿಕಾರಿಗಳು ಅಲೆಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದರು.

ಪಟ್ಟಣದ ತಾಲೂಕು ಆಡಳಿತದ ಮುಂಭಾಗ ಬುಧವಾರ ಸೇರಿದ ಜೆಡಿಎಸ್, ರೈತ ಸಂಘ ಹಾಗೂ ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬಡ ಹಾಗೂ ಅನಕ್ಷರಸ್ಥ ಜನರಿಗೆ ಶೋಷಣೆಗೆ ಒಳಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ಸ್ಪಷ್ಟನೆ ಜತೆಗೆ ಆಡಳಿತದ ಸಿಬ್ಬಂದಿಗೆ ಸರಿಯಾದ ಸೂಚನೆ ನೀಡುವಂತೆ ಗ್ರೇಡ್ 2 ತಹಸೀಲ್ದಾರ್ ಚೈತ್ರಾ ಅವರಿಗೆ ಮನವಿ ಸಲ್ಲಿಸಿದರು.

ವಿಕಲಚೇತನರ ಸಂಘದ ಪದಾಧಿಕಾರಿ ದರಸಗುಪ್ಪೆ ಮಂಜುನಾಥ್ ಮಾತನಾಡಿ ಅಂಗವಿಕಲ, ವೃದ್ದಾಪ್ಯ, ವಿಧವಾ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಪಿಂಚಣಿ ಪಡೆಯುತ್ತಿರುವ 60 ವರ್ಷ ಮೇಲ್ಪಟ್ಟ ಫಲಾನುಭವಿಗಳು ತಮ್ಮ ಹಣವನ್ನು ಹೆಚ್ಚುವರಿಯೊಂದಿಗೆ ಯೋಜನೆ ಮುಂದುವರೆಸಲು ಕಡ್ಡಾಯವಾಗಿ ಜಾತಿ ಮತ್ತು ಆದಾಯ ಪ್ರಮಾಣ ಒದಗಿಸಬೇಕು. ಇಲ್ಲವಾದಲ್ಲಿ ಈ ಯೋಜನೆ ನೀಡುವುದಿಲ್ಲ ಎಂದು ಸಾಕಷ್ಟು ಬಡ ಮತ್ತು ಅಂಗವಿಕಲ ಜನರನ್ನು ನಿತ್ಯ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಿ ಸರ್ಕಾರ ಹೊರಡಿಸಿರುವ ಸುತ್ತೋಲೆ ತೋರಿಸುವಂತೆ ಪ್ರಶ್ನಿಸಿದರೆ ಏರುಧ್ವನಿಯಲ್ಲಿ ಉಲ್ಟಾ-ಸೀದಾ ಉತ್ತರ ನೀಡಿ ಜನರೊಂದಿಗೆ ಲಘುವಾಗಿ ವರ್ತಿಸುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ರೈತ ಮುಖಂಡ ಮಂಜೇಶ್‌ಗೌಡ ಮಾತನಾಡಿ, ರಾಜ್ಯದ ವಿವಿಧ ಯೋಜನೆಗಳ ಫಲಾನುಭವಿಗಳು ಸರ್ಕಾರದ ಸವಲತ್ತು ಪಡೆದುಕೊಳ್ಳಲು ವಿವಿಧ ದಾಖಲೆಗಳ ಸರಳೀಕರಣ ಮಾಡಿರುವುದು ಶ್ಲಾಘನೀಯ. ಆದರೆ ಇಂತಹ ಕ್ರಮಗಳನ್ನು ಅಧಿಕಾರಿ-ಸಿಬ್ಬಂದಿಗಳು ತಪ್ಪಾಗಿ ಅರ್ಥೈಸಿಕೊಂಡು ನಿಜ ಫಲಾನುಭವಿಗಳನ್ನು ಲಭ್ಯವಾಗದ ದಾಖಲೆಗಳನ್ನು ಒದಗಿಸುವಂತೆ ಒತ್ತಡ ನೀಡಿ, ಅಲೆದಾಡಿಸಿ ಅವರನ್ನು ಮಾಶಾಸನಗಳ ಸೌಲಭ್ಯದಿಂದಲೇ ದೂರವಾಗುವಂತೆ ಮಾಡುತ್ತಿರುವುದು ಅನ್ಯಾಯ. ಈ ಸಮಸ್ಯೆ ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಗ್ರೇಡ್2 ತಹಸೀಲ್ದಾರ್ ಚೈತ್ರಾ, ಸರ್ಕಾರಕ್ಕೆ ಆದಾಯ ದೃಢೀಕರಣ ಪ್ರಮಾಣ ಒದಗಿಸಲು ಕೇಳಲಾಗಿದೆಯೇ ಹೊರತು ಇನ್ಯಾವುದೇ ನಿಬಂಧನೆಗಳನ್ನು ಸೂಚಿಸಿಲ್ಲ. ಜತೆಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಈ ಸಮಸ್ಯೆ ಬಗ್ಗೆ ಆಡಳಿತದ ಸಿಬ್ಬಂದಿಗೆ ಸೂಚನೆ ನೀಡಲಾಗುವುದು ಎಂದರು.

ಜೆಡಿಎಸ್ ಕಾರ್ಯಧ್ಯಕ್ಷ ನಗುವನಹಳ್ಳಿ ಶಿವಸ್ವಾಮಿ, ಮುಖಂಡ ಕಿರಂಗೂರು ಕುಮಾರಸ್ವಾಮಿ, ರೈತ ಮುಖಂಡ ಡಿ.ಎಂ.ರವಿ, ಕೃಷ್ಣಪ್ಪ, ಮರವೇ ಅಧ್ಯಕ್ಷ ಶಂಕರ್ ಬಾಬು, ಕಾರ್ಯದರ್ಶಿ ಜಗದೀಶ್ ಗೌಡ, ಕೆಂಪೇಗೌಡ ಯುವಶಕ್ತಿ ವೇದಿಕೆ ಅಧ್ಯಕ್ಷ ಕಾಳೇನಹಳ್ಳಿ ಮಹೇಶ್, ಮಲ್ಲೇಶ್, ಮಂಜುನಾಥ್, ತಮ್ಮಣ್ಣಗೌಡ, ಸುಭಾಷ್ ಇತರರಿದ್ದರು.