ಮದ್ದೂರು ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷೆ ಕೋಕಿಲ ಅರುಣ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಟಿ.ಆರ್.ಪ್ರಸನ್ನಕುಮಾರ್, ಸಿದ್ದರಾಜು, ಮೀನಾಕ್ಷಿ ಇದ್ದರು.  
ಜಿಲ್ಲೆ

ಮಾಹಿತಿ ನೀಡಲು ಅಧಿಕಾರಿಗಳ ಅಸಡ್ಡೆ

ಅಭಿನಯ್ ಎಚ್.ಎಂ

ಮದ್ದೂರು: ಈ ಹಿಂದೆ ಪುರಸಭೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಹಲವು ಬಾರಿ ಮಾಹಿತಿ ಕೇಳಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್‌ನ ಇಬ್ಬರು ಸದಸ್ಯರು ಸಭಾತ್ಯಾಗ ಮಾಡಿದರು.

ಇಲ್ಲಿನ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಕೋಕಿಲಾ ಅರುಣ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯರು ಸಭೆಯಿಂದ ಹೊರ ನಡೆದರು. ಹಲವಾರು ವಾರ್ಡ್‌ಗಳಲ್ಲಿ ಕುಡಿಯುವ ನೀರು, ಒಳಚರಂಡಿ ಕಾಮಗಾರಿ ಸೇರಿದಂತೆ ಕೆಲವು ಕಾಮಗಾರಿಗಳು ಸರಿಯಾಗಿ ನಡೆದಿಲ್ಲ ಎಂದು ಈ ಹಿಂದಿನ ಹಲವು ಸಭೆಗಳಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಭೆ ಆರಂಭದಲ್ಲೇ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಮುಂದಿನ ಸಭೆಯಲ್ಲಿ ಸೂಕ್ತ ಮಾಹಿತಿ ಕೊಡಿಸಲಾಗುವುದು ಎಂದು ಹೇಳಲಾಯಿತಾದರೂ ಪೂರಕ ಮಾಹಿತಿಯನ್ನು ಈ ಸಭೆಯಲ್ಲೂ ಕೊಟ್ಟಿಲ್ಲ ಏಕೆ ಎಂದು ಮುಖ್ಯಾಧಿಕಾರಿ ಮೀನಾಕ್ಷಿ ಅವರನ್ನು ಜೆಡಿಎಸ್ ಸದಸ್ಯರಾದ ಎಸ್.ಮಹೇಶ್ ಹಾಗೂ ಪ್ರಿಯಾಂಕ ಅಪ್ಪುಗೌಡ ಪ್ರಶ್ನಿಸಿ ಸಭಾತ್ಯಾಗ ಮಾಡಿ ಸಭೆಯಿಂದ ಹೊರ ನಡೆದರು.

ಈ ವೇಳೆ ಸಭೆಗೆ ಆಗಮಿಸಿದ ಶಾಸಕ ಕೆ.ಎಂ.ಉದಯ್ ಮಾತನಾಡಿ, ಮುಖ್ಯಾಧಿಕಾರಿ ಎಂ.ಮೀನಾಕ್ಷಿ ಅವರು ಕೂಡಲೇ ಸರಿಯಾದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದು ಸದಸ್ಯರಿಗೆ ಕೊಡಿಸಲು ಕ್ರಮ ಕೈಗೊಳ್ಳಬೇಕು. ಸೂಕ್ತ ಮಾಹಿತಿ ನೀಡದ ಅಧಿಕಾರಿಗಳಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪುರಸಭಾ ವ್ಯಾಪ್ತಿಯಲ್ಲಿ ಬರುವ ಪೇಟೆಬೀದಿ ಮುಂದಿನ ದಿನಗಳಲ್ಲಿ ವಿಸ್ತರಣೆಯಾಗುವುದರಿಂದ ನೆಲದ ಸುಂಕವನ್ನು ರದ್ದುಪಡಿಸಿ ರಸ್ತೆ ಬದಿ ವ್ಯಾಪಾರಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕರು ತಿಳಿಸಿದರು.

ಇದಕ್ಕೂ ಮೊದಲು ಪಟ್ಟಣ ವ್ಯಾಪ್ತಿಯ ಬಹುತೇಕ ವಾರ್ಡ್‌ಳಲ್ಲಿ ಕಸ ವಿಲೇವಾರಿ ಸಮಸ್ಯೆ ಹೆಚ್ಚಾಗಿದ್ದು, ರಸ್ತೆಗಳ ಬಳಿಯೇ ಕಸದ ರಾಶಿ ಹೆಚ್ಚಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಕೇಳಿದರೆ ಕಸ ವಿಲೇವಾರಿ ವಾಹನಗಳನ್ನು ರಿಪೇರಿ ಮಾಡಿಸಬೇಕೆಂದು ಕಾರಣ ಹೇಳುತ್ತಿದ್ದಾರೆ. ಎಷ್ಟು ದಿನ ಬೇಕು ನಿಮಗೆ ಸಮಸ್ಯೆ ಸರಿಪಡಿಸಲು ಎಂದು ಅಧಿಕಾರಿಗಳನ್ನು ಸದಸ್ಯರಾದ ಸುರೇಶ್, ಪ್ರವೀಣ್, ನಂದೀಶ್, ಕಮಲ್‌ನಾಥ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಅಧ್ಯಕ್ಷ ಕೋಕಿಲಾ ಅರುಣ್ ಹಾಗೂ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಕೂಡಲೇ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಪಟ್ಟಣದ ಶಿವಪುರದ ಬಳಿಯ ಒಂದು ಎಕರೆ ಜಾಗದಲ್ಲಿ ಮಾಂಸದ ಮಾರುಕಟ್ಟೆ ಹಾಗೂ ಹಳೇ ಬಸ್ ಸ್ಟಾೃಂಡ್ ಬಳಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪುರಸಭೆಯನ್ನು ನಗರಸಭೆಯನ್ನಾಗಿ ಮೆಲ್ದರ್ಜೆಗೇರಿಸುವ ಸಂಬಂಧ ಸೋಮನಹಳ್ಳಿ, ಚಾಮನಹಳ್ಳಿ, ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯತಿಗಳು ಒಪ್ಪಿಗೆ ಸೂಚಿಸಿರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ವಿಷಯಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಪಟ್ಟಣದ ವ್ಯಾಪ್ತಿಯ ಕೊಪ್ಪ ವೃತ್ತ, ಕೊಲ್ಲಿ ವೃತ್ತ ಸೇರಿದಂತೆ ಎಲ್ಲಾ ಹೈ ಮಾಸ್ಕ್ ವಿದ್ಯುತ್ ದೀಪಗಳನ್ನು ದುರಸ್ತಿ ಪಡಿಸಬೇಕೆಂದು ಸದಸ್ಯರು ಆಗ್ರಹಿಸಿದರು ಹಾಗೂ 2 ಹೊಸ ಸಕ್ಕಿಂಗ್, ಜೇಟ್ಟಿಂಗ್ ಯಂತ್ರಗಳನ್ನು ಖರೀದಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಉಪಾಧ್ಯಕ್ಷ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು ಇತರರು ಇದ್ದರು.