ಜಿಲ್ಲೆ

ಕೆಡಿಪಿ ಸಭೆಯಲ್ಲಿ ತಡಬಡಾಯಿಸಿದ ಅಧಿಕಾರಿಗಳು !

ತುಮಕೂರು ಡೆಸ್ಕ್

ಸಮರ್ಪಕ ಉತ್ತರ ನೀಡದವರ ವಿರುದ್ಧ ಸಚಿವದ್ವಯರು ಕೆಂಡಾಮಂಡಲ | ಜಿಲ್ಲಾಧಿಕಾರಿ, ಸಿಇಒ ತಬ್ಬಿಬ್ಬು

ವಿಜಯವಾಣಿ ಸುದ್ದಿಜಾಲ ತುಮಕೂರು
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ತೆಮಾಸಿಕ ಕೆಡಿಪಿ ಸಭೆಯಲ್ಲಿ ಸಮರ್ಪಕವಾಗಿ ಉತ್ತರ ನೀಡದ ಜಿಲ್ಲಾಮಟ್ಟದ ಅಧಿಕಾರಿಗಳ ವಿರುದ್ಧ ಸಚಿವದ್ವಯರು ಕೆಂಡಾಮಂಡಲರಾದರು.


"ಅಂಕಿ, ಅಂಶಗಳ ಸಮೇತ ನಿಖರ ಉತ್ತರ ನೀಡಲಾಗದ ಅಸಮರ್ಥರು, ಕಚೇರಿಯಲ್ಲಿ ಕುಳಿತು ಹೊಟ್ಟೆ ಬೆಳೆಸಿಕೊಂಡಿದ್ದೀರಾ' ಎಂದು ಸಚಿವ ಕೆ.ಎನ್​.ರಾಜಣ್ಣ ಹಾಗೂ "ನಿಮ್ಮ ಕಾರ್ಯವೈಖರಿ ನೋಡಿದರೆ ಸಾರ್ವಜನಿಕರ ಮುಂದೆಯೇ ನೇಣು ಹಾಕಬೇಕಷ್ಟೇ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹರಿಹಾಯ್ದರು.


ತಪ್ಪು ಅಂಕಿ- ಅಂಶಗಳೊಂದಿಗೆ ಸಭೆಗೆ ಹಾಜರಾಗಿದ್ದ ಅಧಿಕಾರಿಗಳು ಸಚಿವದ್ವಯರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಸಚಿವ, ಶಾಸಕರುಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದರೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಿಸಿ ಮದ್ದಿನೇನಿ, ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹಾಗೂ ಜಿಪಂ ಸಿಇಒ ಜಿ.ಪ್ರಭು ಕೂಡ ತಬ್ಬಿಬ್ಬಾಗಿ ತಲೆಬಗ್ಗಿಸಿ ಕುಳಿತಿದ್ದರು.


ಮಧುಗಿರಿ ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗೆ ತಂದಿದ್ದ ಪೈಪ್​ಗಳು ಕಳವಾಗುತ್ತಿರುವ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿ ಹಾಗೂ ಮನರೇಗಾ ಯೋಜನೆಯಲ್ಲಿ ಗುರಿ ಸಾಧನೆಗೆ ವಿಲರಾಗಿರುವ ತೋಟಗಾರಿಕೆ ಇಲಾಖೆ ಡಿಡಿಗೆ ನೋಟಿಸ್​ ನೀಡಲು ಪರಮೇಶ್ವರ ಸೂಚಿಸಿದರು. ಸಭೆಯಲ್ಲಿ ತಡವಾಗಿ ಬಂದವರನ್ನು ಪರಮೇಶ್ವರ್​ ಹೊರಗೆ ನಿಲ್ಲಿಸಿದ ಪ್ರಸಂಗ ಸಹ ಜರುಗಿತು. ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಜಿಲ್ಲೆ ಕೊನೇ ಸ್ಥಾನದಲ್ಲಿರುವ ಬಗ್ಗೆ ಸಂಸದ ಗೋವಿಂದ ಕಾರಜೋಳ ಸಹಿತ ಸಭೆಯಲ್ಲಿದ್ದವರೆಲ್ಲರೂ ಅಸಮಾಧಾನ ಹೊರಹಾಕಿದರು. ಶಿಕ್ಷಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಚಿವ ಕೆ.ಎನ್​.ರಾಜಣ್ಣ ಸಿಡಿಮಿಡಿಗೊಂಡರು. ಶಿಕ್ಷಣ ಸಚಿವ ಮಧುಬಂಗಾರಪ್ಪ ಸಹ ಸಭೆಯಲ್ಲಿ ಭಾಗವಹಿಸಿ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಶಾಸಕರ ಮನವಿ ಆಲಿಸಿದರು.


ಮುಂದಿನ ವರ್ಷದ ಮಳೆಗಾಲದ ಆರಂಭದ ವೇಳೆಗೆ ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ ತುಮಕೂರು ಜಿಲ್ಲೆಗೆ ನೀರು ಬರಲಿದೆ, ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಸಚಿವ ಕೆ.ಎನ್​. ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಟಿ.ಬಿ.ಜಯಚಂದ್ರ, ಎಸ್​.ಆರ್​.ಶ್ರೀನಿವಾಸ್​, ಕೆ.ಷಡಕ್ಷರಿ, ಬಿ.ಸುರೇಶ್​ಗೌಡ, ಜಿ.ಬಿ.ಜ್ಯೋತಿಗಣೇಶ್​, ಎಂ.ಟಿ.ಕೃಷ್ಣಪ್ಪ, ಡಾ.ಎಚ್​.ಡಿ.ರಂಗನಾಥ್​, ಎಚ್​.ವಿ.ವೆಂಕಟೇಶ್​ ಸಭೆಯಲ್ಲಿದ್ದರು.

ಮತ್ತೆ ಚರ್ಚೆಗೆ ಬಂದ ಲಿಂಕ್​ ಕೆನಾಲ್​!
ರಾಮನಗರ ಜಿಲ್ಲೆಗೆ ನೀರು ಕೊಂಡೊಯ್ಯುವ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಪೈಪ್​ಲೈನ್​ ಯೋಜನೆ ವಿರೋಧಿಸಿ ಕಳೆದ ಕೆಡಿಪಿ ಸಭೆಯಲ್ಲಿ ತೆಗೆದುಕೊಂಡಿದ್ದ ನಡಾವಳಿಯನ್ನು ಉದಾಸೀನ ಮಾಡಿರುವ ಸರ್ಕಾರದ ನಿರ್ಧಾರ ಬಗ್ಗೆ ಶಾಸಕರು ಅಸಮಾಧಾನ ಹೊರಹಾಕಿದರು. ಶಾಸಕ ಎಂ.ಟಿ.ಕೃಷ್ಣಪ್ಪ ವಿಷಯ ಪ್ರಸ್ತಾಪಿಸಿ ಜಿಲ್ಲೆಗೆ ಅನ್ಯಾಯವಾಗುತ್ತಿದ್ದರೂ ನಮ್ಮ ವಿರೋಧ ಲೆಕ್ಕಿಸುತ್ತಿಲ್ಲ ಎಂದರು.
ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ಕುಣಿಗಲ್​ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿಲ್ಲ. ಆದರೆ, ಅಚ್ಚುಕಟ್ಟು ಪ್ರದೇಶ ಕಡಿಮೆಯಾಗಿದೆ ಎಂದು ವರದಿ ಪಡೆದು ಜಿಲ್ಲೆಯ ಪಾಲಿನ ನೀರನ್ನು ಬೇರೆಡೆಗೆ ತೆಗೆದುಕೊಂಡು ಹೋಗುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು. ಶಿರಾ ಪಾಲಿನ 0.9 ಎಂಸಿಎ್​ಟಿ ಬದಲಾಗಿ 4ಟಿಎಂಸಿ ತೆಗೆದುಕೊಂಡು ಹೋಗುವಂತೆ ಕಾಲುವೆಯಿದೆ. ಇದರಿಂದ ತುಮಕೂರು ನಗರಕ್ಕೆ ನೀರಿಲ್ಲದಂತಾಗಿದೆ ಎಂದರು.

ಶಾಸಕರ ನಡುವೆ ಜಟಾಪಟಿ: ಲಿಂಕ್​ ಕೆನಾಲ್​ ಸಂಬಂಧಿಸಿದಂತೆ ಚರ್ಚೆ ಶುರುವಾದಾಗ ಶಾಸಕ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್​ಗೌಡ ಹಾಗೂ ಡಾ.ಎಚ್​.ಡಿ.ರಂಗನಾಥ್​ ನಡುವೆ ಮಾತಿನ ಜಟಾಪಟಿಯೇ ನಡೆಯಿತು. "ನಿಮಗೆಲ್ಲರಿಗೂ ಕೈಮುಗಿದು ಕೇಳುತ್ತೇನೆ ನಮಗೆ ತೊಂದರೆ ಮಾಡಬೇಡಿ' ಎಂದು ರಂಗನಾಥ್​ ಮನವಿ ಮಾಡಿದರು. ನಿಮಗೆ ರಾಜಕೀಯ ಶಕ್ತಿ ಬೇಕಿದ್ದರೆ ನಾನೇ ಶರಣಾಗುತ್ತೇನೆ ಆದರೆ, ರಾಜಕೀಯ ಲಾಭಕ್ಕಾಗಿ ಕುಣಿಗಲ್​ ಬಡಜನರಿಗೆ ಅನ್ಯಾಯ ಮಾಡಬೇಡಿ ಎಂದರು.ಈ ಸಂದರ್ಭದಲ್ಲಿ ಶಾಸಕರಾದ ಎಸ್​.ಆರ್​.ಶ್ರೀನಿವಾಸ್​, ಟಿ.ಬಿ.ಜಯಚಂದ್ರ ಯಾವುದೇ ಮಾತನಾಡದೆ ಸುಮ್ಮನಾಗಿದ್ದರು. ಮಾಗಡಿಗೆ ನೀಡುವ ಹಂಚಿಕೆ ಬಗ್ಗೆ ಸಚಿವ ರಾಜಣ್ಣ ಆಕ್ಷೇಪಿಸಿದರು. ಜಿಲ್ಲೆಯವರೇ ಆಗಿರುವ ನೀರಾವರಿ ಇಲಾಖೆ ಸಲಹೆಗಾರ ನಿವೃತ್ತ ಇಂಜಿನಿಯರ್​ ಜಯಪ್ರಕಾಶ್​ ವಿರುದ್ಧ ಶಾಸಕರೆಲ್ಲರೂ ಅಸಮಧಾನ ಹೊರಹಾಕಿ, ಅವರು ಸರಿಯಾಗಿದ್ದರೆ ಜಿಲ್ಲೆಗೆ ಅನ್ಯಾಯವಾಗುತ್ತಿರಲಿಲ್ಲ ಎಂದರು. ಈಗಾಗಲೇ ರಚನೆಯಾಗಿರುವ ತಾಂತ್ರಿಕ ಸಮಿತಿ ಶಾಸಕರನ್ನು ಭೇಟಿಯಾಗಲು ಬಯಸಿದ್ದು, ಅವರೊಂದಿಗೆ ಚರ್ಚೆ ನಡೆಸಿದ ನಂತರ ನಾವು ಈ ಬಗ್ಗೆ ರ್ನಿಣಯ ತೆಗೆದುಕೊಳ್ಳೊಣ ಎಂದು ಶಾಸಕರನ್ನು ಸಮಾಧಾನಪಡಿಸಿದರು.

ನಿಮಗ್ಯಾವ ಶಿಕ್ಷೆ ಕೊಡಲಿ?
ಜಿಲ್ಲೆಯಲ್ಲಿರುವ ಶುದ್ಧ ನೀರಿನ ಟಕಗಳ ಬಗ್ಗೆ ಅಧಿಕಾರಿಗಳು ನೀಡಿದ ಮಾಹಿತಿಗೆ ಕೆ.ಎನ್​.ರಾಜಣ್ಣ ಸೇರಿ ಸಭೆಯಲ್ಲಿದ್ದ ಶಾಸಕರೆಲ್ಲರೂ ಅಧಿಕಾರಿಗಳ ವಿರುದ್ಧ ಸಿಟ್ಟಾದರು. ಸಚಿವ ಕೆ.ಎನ್​.ರಾಜಣ್ಣ ಮಾತನಾಡಿ, ಸಭೆಗೆ ಬಂದಿರುವ ಅಂಕಿ, ಅಂಶಗಳನ್ನು ದೃಢಪಡಿಸಿದರೆ ಕೊಟ್ಟ ಶಿಕ್ಷೆ ಅನುಭವಿಸುತ್ತೇನೆ, ವರದಿ ಸುಳ್ಳಾದರೆ ನಿಮಗ್ಯಾವ ಶಿೆ ಕೊಡಲಿ ಹೇಳಿ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸವಾಲೆಸೆದರು. ವಸತಿ ಯೋಜನೆ ಅನುಷ್ಠಾನದಲ್ಲಿ ಪ್ರಗತಿಯಾಗದಿರುವ ಬಗ್ಗೆ ಪರಮೇಶ್ವರ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ಸಭೆಯೊಳಗೆ ತಾಲೂಕುಮಟ್ಟದಲ್ಲಿ ಪ್ರವಾಸ ನಡೆಸಿ ವರದಿ ನೀಡಬೇಕು. ನಿವೇಶನ ನಿರ್ಮಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಪಂ ಸಿಇಒಗೆ ಸೂಚಿಸಿದರು.

ಜಿಲ್ಲೆಯಲ್ಲಿ ಬಹುತೇಕ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಹೊಟ್ಟೆ ಬೆಳೆಸಿಕೊಂಡಿದ್ದಾರೆ. ಹಳ್ಳಿಗಳಿಗೆ ಹೋಗುತ್ತಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಕೆಳಹಂತದಲ್ಲಿ ಅನುಷ್ಠಾನ ಕೂಡಾ ಮಾಡುತ್ತಿಲ್ಲ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ತ್ವರಿತಗತಿಯಲ್ಲಿ ಜನರ ಕೆಲಸ ಮಾಡಿಕೊಡಬೇಕು.| ಕೆ.ಎನ್​.ರಾಜಣ್ಣ, ಸಹಕಾರ ಸಚಿವ ನೀರಾವರಿ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರುವುದು ಮುಖ್ಯ. ನಾವು ಜಗಳವಾಡಿದರೆ ಜನರೂ ಜಗಳವಾಡುತ್ತಾರೆ. ತಾಂತ್ರಿಕ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿ. ನಂತರ ಸಿಎಂ ಹಂತದಲ್ಲಿ ಮತ್ತೊಮ್ಮೆ ವಿಷಯ ಚರ್ಚೆಗೆ ಬರಲಿದೆ. ಆ ಸಮಯದಲ್ಲಿ ಜಿಲ್ಲೆಯ ಹಿತಕಾಯಲು ಸಹೋದರರಂತೆ ಹೋರಾಡೋಣ.| ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ