ಜಿಲ್ಲೆ

ಬಿಡಿಎನಲ್ಲಿ ಇಎಂ ಹುದ್ದೆಗಾಗಿ ಅಧಿಕಾರಿಗಳ ಫೈಟ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಭಿಯಂತರ ಸದಸ್ಯ (ಇಎಂ) ಹುದ್ದೆಗಾಗಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಡಾ. ಎಚ್.ಆರ್.ಶಾಂತಾರಾಜಣ್ಣ ಹಾಗೂ ನಿಯೋಜಿತ ಅಧಿಕಾರಿ ಟಿ.ಡಿ.ನಂಜುಂಡಪ್ಪ ಮಧ್ಯೆ ಕುರ್ಚಿ ಫೈಟ್ ನಡೆದಿದ್ದು, ವರ್ಗಾವಣೆ ಬಳಿಕ ಹುದ್ದೆ ಬಿಟ್ಟುಕೊಡುವ ವಿಚಾರ ತಾರಕಕ್ಕೇರಿದೆ.

ಕಳೆದ ವಾರ ಸರ್ಕಾರವು ಇಎಂ ಹುದ್ದೆಯಿಂದ ಡಾ. ಎಚ್.ಆರ್.ಶಾಂತಾರಾಜಣ್ಣ ಅವರನ್ನು ವರ್ಗಾವಣೆ ಮಾಡಿ ಆ ಹುದ್ದೆಗೆ ಮುಖ್ಯ ಇಂಜಿನಿಯರ್ ಶ್ರೇಣಿಯ ನಂಜುಂಡಪ್ಪರನ್ನು ನೇಮಿಸಿದೆ. ನೇಮಕ ಆದೇಶ ಹಿಡಿದು ಬಿಡಿಎ ಕಚೇರಿಗೆ ಆಗಮಿಸಿದಾಗ ನಂಜುಂಡಪ್ಪಗೆ ಕಹಿ ಅನುಭವವಾಗಿದೆ. ಹುದ್ದೆ ಬಿಟ್ಟುಕೊಡಲು ಶಾಂತಾರಾಜಣ್ಣ ನಿರಾಕರಿಸಿದ್ದು, ಮತ್ತೆ ಇದೇ ಸ್ಥಾನದಲ್ಲಿ ಮುಂದುವರಿಯುವುದಾಗಿ ಪ್ರತಿಪಾದಿಸಿದ್ದಾರೆ. ಇದರಿಂದಾಗಿ ವರ್ಗಾವಣೆಯಾಗಿ ಬಂದಿರುವ ನಂಜುಂಡಪ್ಪ ಹುದ್ದೆ ವಹಿಸಿಕೊಳ್ಳಲಾಗದೆ ಜಟಾಪಟಿಗೆ ಅವಕಾಶ ಮಾಡಿಕೊಟ್ಟಿದೆ.

ಈ ಇಬ್ಬರೂ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಹಿರಿಯ ಇಂಜಿನಿಯರ್‌ಗಳಾಗಿದ್ದಾರೆ. ಬಿಡಿಎನ ಇಎಂ ಸ್ಥಾನಕ್ಕೆ ಪಿಡಬ್ಲ್ಯುಡಿಯಿಂದ ನಿಯೋಜನೆ ಮಾಡಲಾಗುತ್ತದೆ. ನಾಲ್ಕು ವರ್ಷದ ಹಿಂದೆ ಎಚ್.ಆರ್.ಶಾಂತಾರಾಜಣ್ಣ ಪ್ರಾಧಿಕಾರದ ಇಎಂ ಹುದ್ದೆ ಅಲಂಕರಿಸಿದ್ದರು. ಡಾ.ಶಿವರಾಮ ಕಾರಂತ ಬಡಾವಣೆ ರಚನೆಯ ಹೊಣೆ ನೀಡಿದ್ದರಿಂದ ಹಿಂದೊಮ್ಮೆ ವರ್ಗಾವಣೆಗೆ ಆದೇಶ ಆಗಿದ್ದರೂ, ಸುಪ್ರೀಂಕೋರ್ಟ್ ನಿಗಾ ಸಮಿತಿಯು ಇವರನ್ನು ಎತ್ತಂಗಡಿ ಮಾಡದೆ ಕಾಮಗಾರಿ ಪೂರ್ಣವಾಗುವವರೆಗೂ ಮುಂದುವರಿಸುವಂತೆ ನಿರ್ದೇಶನ ನೀಡಿತ್ತು. ಆ ಸಂದರ್ಭದಲ್ಲಿ ಅವರು ಒಮ್ಮೆ ಬಡ್ತಿಯನ್ನು ತಪ್ಪಿಸಿಕೊಂಡು ನೀರಾವರಿ ನಿಗಮವೊಂದರ ಎಂಡಿ ಸ್ಥಾನದಿಂದ ವಂಚಿತರಾಗಿದ್ದರು.

ಇದೀಗ 4 ವರ್ಷದ ಬಳಿಕ ವರ್ಗಾವಣೆ ಮಾಡಿರುವಾಗ ನಿಯಮದಂತೆ ಹೊಸ ಹುದ್ದೆಯನ್ನು ವಹಿಸಿಕೊಳ್ಳಬೇಕು. ಆದರೆ, ಶಾಂತಾರಾಜಣ್ಣ ಅವರು ನಂಜುಂಡಪ್ಪಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದಾರೆ. ಇದೇ ಸ್ಥಾನದಲ್ಲಿ ಮತ್ತೊಂದು ವರ್ಷ ಮುಂದುವರಿಯಲು ಪ್ರಭಾವಿ ಸಚಿವರೊಬ್ಬರು ಸಿಎಂಗೆ ಶಿಾರಸು ಮಾಡಿದ್ದಾರೆಂಬ ಕಾರಣಕ್ಕೆ ಹುದ್ದೆಯಿಂದ ನಿರ್ಗಮಿಸಿಲ್ಲ. ಇತ್ತ ನಂಜುಂಡಪ್ಪ ಸರ್ಕಾರ ತಮಗೆ ವಹಿಸಿರುವ ಹೊಸ ಹುದ್ದೆಯನ್ನು ಬಿಟ್ಟುಕೊಡುವಂತೆ ಆದೇಶ ಪ್ರತಿ ಪ್ರದರ್ಶಿಸಿದರೂ, ಹಾಲಿ ಇಎಂ ಸೊಪ್ಪು ಹಾಕುತ್ತಿಲ್ಲ. ಪ್ರಕರಣವನ್ನು ಪ್ರಾಧಿಕಾರದ ಆಯುಕ್ತರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂಬ ಕಾರಣಕ್ಕೆ, ನಂಜುಂಡಪ್ಪ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಬಿಡಿಎಗೆ ನಿಯೋಜಿತರ ಭಾರ?:

ಸದ್ಯ ಬಿಡಿಎನಲ್ಲಿ ಒಬ್ಬ ಕಾಯಂ ಇಂಜಿನಿಯರ್ ಕೂಡ ಇಲ್ಲ. ಎಲ್ಲ ಅಭಿಯಂತರರ ಹುದ್ದೆಗಳಿಗೆ ಅನ್ಯ ಇಲಾಖೆಗಳಿಂದ ನಿಯೋಜಿತರಾಗಿದ್ದಾರೆ. ಎರವಲು ಸೇವೆ ಆಧರಿಸಿ 3ರಿಂದ ಗರಿಷ್ಠ 5 ವರ್ಷ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ. ಆ ಬಳಿಕ ಮಾತೃ ಇಲಾಖೆಗೆ ವಾಪಸ್ ಹೋಗಬೇಕಾಗುತ್ತದೆ. ಆದರೆ, ಬಿಡಿಎನಲ್ಲಿ ಪ್ರಭಾವ ಬೆಳೆಸಿ ಆರೇಳು ವರ್ಷ ಒಂದೇ ವಿಭಾಗದಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳ ಸಂಖ್ಯೆ ಹೆಚ್ಚಿದೆ. ದೊಡ್ಡ ಮೊತ್ತದ ವೇತನ ಪಡೆಯುವ ಅಭಿಯಂತರರಿಗೆ ಹೆಚ್ಚಿನ ಕಾರ್ಯಬಾಹುಳ್ಯ ಇಲ್ಲದಿದ್ದರೂ, ಬಿಡಿಎನಲ್ಲಿ ಅಗತ್ಯಕ್ಕಿಂತ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆಕ್ಷೇಪ ಕೇಳಿಬಂದಿದೆ.