ಪಾಂಡವಪುರ: ಪಟ್ಟಣದ ಪ್ರತಿಯೊಂದು ವಾರ್ಡ್‌ಗಳ ಸ್ವಚ್ಛತೆ ನಿರ್ವಹಿಸುವಲ್ಲಿ ಪುರಸಭೆ ಆರೋಗ್ಯಾಧಿಕಾರಿಗಳು ವಿಫಲರಾಗಿದ್ದು, ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ಪುರಸಭೆ ಸದಸ್ಯರು ಮುಖ್ಯಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಪೌರಕಾರ್ಮಿಕರು ಪಟ್ಟಣದ ಯಾವ್ಯಾವ ವಾರ್ಡ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಹಿರಿಯ ಆರೋಗ್ಯಾಧಿಕಾರಿ ಬಸವರಾಜು, ಕಿರಿಯ ಆರೋಗ್ಯಾಧಿಕಾರಿ ನಿಂಗೇಗೌಡ, ಗುತ್ತಿಗೆದಾರ ಸುಬ್ರಹ್ಮಣ್ಯ ಹಾಗೂ ಉಸ್ತುವಾರಿ ರಮೇಶ್ ಅವರೊಡನೆ ಪಟ್ಟಣದ ಪ್ರತಿ ವಾರ್ಡ್‌ಗೂ ತೆರಳಿ ಪರಿಶೀಲಿಸಿ, ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಮಾಹಿತಿ ಪಡೆದರು. ಬಳಿಕ ಪುರಸಭೆ ಮುಖ್ಯಾಧಿಕಾರಿ ವೀಣಾ ಅವರ ಬಳಿಗೆ ತೆರಳಿ ಆರೋಗ್ಯಾಧಿಕಾರಿಗಳ ಕರ್ತವ್ಯ ಬಗ್ಗೆ ಪುರಸಭೆ ಸದಸ್ಯರು ಸೋಮವಾರ ಪ್ರಶ್ನಿಸಿದರು.
ಪುರಸಭೆ ವ್ಯಾಪ್ತಿಯ ವಾರ್ಡ್‌ಗಳ ಸ್ವಚ್ಛತೆಗಾಗಿ 33 ಪೌರ ಕಾರ್ಮಿಕರು ನೇಮಕವಾಗಿದ್ದಾರೆ. ಈ ಪೈಕಿ ಪ್ರತಿನಿತ್ಯ ಐದರಿಂದ ಆರು ನೌಕರರು ಗೈರಾಗುತ್ತಿದ್ದ್ದಾರೆ. ಉಳಿದ ನೌಕರರನ್ನು ಸಮರ್ಥವಾಗಿ ಬಳಿಸಿಕೊಂಡು ಪಟ್ಟಣ ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆ ಆರೋಗ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಸೋಮಾವಾರ (ಮೇ 27) ಹಾಜರಾತಿ ಪುಸ್ತಕದಲ್ಲಿ 26 ಪೌರ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಹಾಜರಾತಿ ಪುಸ್ತಕದಲ್ಲಿ ನಮೂದಾಗಿದೆ. ಆದರೆ ಈ ಬಗ್ಗೆ ಆರೋಗ್ಯಾಧಿಕಾರಿಗಳ ಜತೆಯಲ್ಲೇ ತೆರಳಿ ಪರಶೀಲನೆ ನಡೆಸಿದ್ದಾಗ ಕೇವಲ 19 ಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುತ್ತಿರುವುದು ತಿಳಿದು ಬಂದಿತು. ಕೆಲಸಕ್ಕೆ ಗೈರಾದ ಕಾರ್ಮಿಕರಿಗೂ ಕೂಡ ಯಾವ ಕಾರಣಕ್ಕಾಗಿ ಹಾಜರಾತಿ ನೀಡಲಾಗಿದೆ ಎಂಬುದನ್ನು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಬೇಕು ಎಂದು ಸದಸ್ಯರು ಪಟ್ಟುಹಿಡಿದರು.
ಪುರಸಭೆ ಮುಖ್ಯಾಧಿಕಾರಿ ಮಾತನಾಡಿ, ಇರುವ 33 ಪೌರ ಕಾರ್ಮಿಕರಲ್ಲಿ ಆರೋಗ್ಯದ ಸಮಸ್ಯೆಯಿಂದ ನಿತ್ಯ ಐದಾರು ಕಾರ್ಮಿಕರು ಗೈರಾಗುತ್ತಿದ್ದಾರೆ. ಪಟ್ಟಣ ಸ್ವಚ್ಛತೆ ವಿಚಾರದಲ್ಲಿ ಪುರಸಭೆ ಸದಸ್ಯರು ಕೈ ಹಾಕದಿದ್ದರೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಸಮಸ್ಯೆ ಬಾರದಂತೆ ಕೆಲಸ ನಿರ್ವಹಿಸುತ್ತಾರೆ. ಇಲ್ಲಿ ನಾವು ಹೇಳಿದಂತೆ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಪುರಸಭೆ ಸದಸ್ಯರು ತಮ್ಮಿಷ್ಟ ಬಂದಂತೆ ಪೌರ ಕಾರ್ಮಿಕರನ್ನು ತಮ್ಮ ವಾರ್ಡ್‌ಗಳಿಗೆ ಕರೆದುಕೊಂಡು ಹೋಗುತ್ತಿರುವುದರಿಂದ ಸಮಸ್ಯೆ ಉಲ್ಬಣವಾಗುತ್ತಿದೆ. ಅಧಿಕಾರಿಗಳ ಜವಾಬ್ದಾರಿಗೆ ಬಿಟ್ಟರೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಆರೋಗ್ಯಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬುದು ಅರಿವಿಗೆ ಬಂದಿದೆ. ಸದಸ್ಯರು ಅಧಿಕಾರಿಗಳೊಂದಿಗೆ ಕೈಜೋಡಿಸಿದರೆ ಸಮಸ್ಯೆ ಬರುವುದಿಲ್ಲ. ಎಲ್ಲರೂ ಸಹಕಾರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ಹಿರಿಯ ಆರೋಗ್ಯಾಧಿಕಾರಿ ಬಸವರಾಜು, ಕಿರಿಯ ಆರೋಗ್ಯಾಧಿಕಾರಿ ನಿಂಗೇಗೌಡ, ಪೌರಕಾರ್ಮಿಕರ ಗುತ್ತಿಗೆದಾರ ಸುಬ್ರಹ್ಮಣ್ಯ ಹಾಗೂ ಮೇಲ್ವಿಚಾರಕ ಬೀರಶೆಟ್ಟಹಳ್ಳಿ ರಮೇಶ್ ವಿರುದ್ಧ ಕರ್ತವ್ಯ ಲೋಪದಡಿ ಕ್ರಮ ಕೈಗೊಳ್ಳುವಂತೆ ಪುರಸಭೆ ಸದಸ್ಯರಿಂದ ಮುಖ್ಯಾಧಿಕಾರಿ ವೀಣಾ ಅವರಿಗೆ ಮನವಿ ಸಲ್ಲಿಸಲಾಯಿತು. ಸದಸ್ಯರಾದ ಪಾರ್ಥಸಾರಥಿ, ಶಿವಕುಮಾರ್, ಚಂದ್ರು, ಜೆಡಿಎಸ್ ಮುಖಂಡರಾದ ಹಾರೋಹಳ್ಳಿ ಉಮೇಶ್, ಜಯರಾಮು, ಆರ‌್ಮುಗಂ ಇತರರು ಇದ್ದರು.