ಜಿಲ್ಲೆ

ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳ ಕುಮ್ಮಕ್ಕು

ಬಸವರಾಜ ವೀರಪ್ಪ ಗರಗ

ಶಿಗ್ಗಾಂವಿ(ಗ್ರಾ): ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಗಾರರ ಹಾವಳಿ ಹೆಚ್ಚಾಗಿದ್ದು, ಕೂಡಲೇ ಅವುಗಳನ್ನು ಬಂದ್ ಮಾಡಬೇಕು ಎಂದು ಹೋತನಹಳ್ಳಿ ಗ್ರಾಮದ ಮಹಿಳೆಯರು ಗುರುವಾರ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಮದ ಎಲ್ಲೆಂದರಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿದೆ. ಇದರಿಂದ ಕುಡುಕರ ಹಾವಳಿ ಹೆಚ್ಚಾಗಿದೆ. ಕುಡಿದು ಬಂದು ಹಣಕ್ಕಾಗಿ ತಾಯಿ, ಹೆಂಡತಿಯರನ್ನು ಪೀಡಿಸುತ್ತಾರೆ. ಹಣ ನೀಡದೆ ಇದ್ದರೆ ಹಲ್ಲೆ ನಡೆಸುತ್ತಾರೆ. ಇದರಿಂದಾಗಿ ನೆಮ್ಮದಿ ಇಲ್ಲದಂತಾಗಿದೆ. ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಮದಲ್ಲಿನ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ಅಬಕಾರಿ ಇಲಾಖೆ ಸಿಬ್ಬಂದಿಯನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ‘ಮದ್ಯ ಮಾರಾಟಕ್ಕೆ ನೀವೇ ಕುಮ್ಮಕ್ಕು ನೀಡುತ್ತಿದ್ದೀರಿ. ನಿಮಗೆ ಹೆಂಡತಿ, ಮಕ್ಕಳು ಇಲ್ವಾ? ಹೆತ್ತವರಿಗೆ ಆಸರೆಯಾಗಬೇಕಿದ್ದ ಮಕ್ಕಳು, ಯುವಕರು ಸಾಯುತ್ತಿದ್ದಾರೆ. ಅಂಗಡಿಯವರು ಉದ್ರಿ ಕೊಟ್ಟು ಗಂಡಂದಿರು ಮತ್ತು ಹರೆಯದ ಮಕ್ಕಳನ್ನು ಪಾಪಕೂಪಕ್ಕೆ ತಳ್ಳುತ್ತಿದ್ದಾರೆ. ಇದಕ್ಕೆಲ್ಲ ನೀವೇ ಕಾರಣ’ ಎಂದು ಆರೋಪಿಸಿದರು. ಗ್ರಾಮದಲ್ಲಿರುವ ಮದ್ಯದಂಗಡಿಗಳನ್ನು ತೋರಿಸುತ್ತೇವೆ. ಆ ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ಪಟ್ಟು ಹಿಡಿದರು.

ಒತ್ತಾಯಕ್ಕೆ ಮಣಿದ ಅಧಿಕಾರಿಗಳು:

ಎಲ್ಲ ಮದ್ಯದಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಅಕ್ರಮ ಮದ್ಯ ಮಾರುತ್ತಿರುವುದು ಕಂಡು ಬಂದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಹೋತನಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ನಾಳೆಯಿಂದಲೇ ಗ್ರಾಮದಲ್ಲಿ ಸಿಬ್ಬಂದಿ ನೇಮಕ ಮಾಡಲಾಗುವುದು. ಮಾರಾಟ ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಿಪಿಐ ಪ್ರಕಾಶ ಮಾಕೋಡ ಗ್ರಾಮಸ್ಥರಿಗೆ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಗ್ರಾಮಸ್ಥರಾದ ನಾಗಮ್ಮ ಮುಗಳಿಕಟ್ಟಿ, ಶಾಂತವ್ವ ಬಮ್ಮನಹಳ್ಳಿ, ಪುಟ್ಟವ್ವ ಪೂಜಾರ, ಬಸಮ್ಮ ಕೆಮ್ಮನಕೇರಿ, ಚನ್ನಬಸವ್ವ ರ್ಬಾ, ಚನ್ನಬಸವ್ವ ಕೋರಿ, ಪ್ರವೀಣ ಗೂಳಣ್ಣವರ, ದ್ಯಾಮಣ್ಣ ಸವಣೂರ, ಯೂನಿಸ್ ಕಲ್ಯಾಣ, ಬಸನಗೌಡ ಕೆಮ್ಮನಕೇರಿ, ಪಿ.ಎನ್. ಗೂಳಣ್ಣವರ, ಶಿದ್ದನಗೌಡ ಪಾಟೀಲ, ಉಮೇಶ ಗುಳೇದ, ಇತರರು ಉಪಸ್ಥಿತರಿದ್ದರು.

ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ತಾಲೂಕು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿದ್ದಲ್ಲಿ ಅಂಥವರ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು. | ಯಾಸೀರ್​ಖಾನ್ ಪಠಾಣ ಶಾಸಕ ನನಗೆ ನಾಲ್ಕು ಜನ ಗಂಡು ಮಕ್ಕಳು. ಎಲ್ಲರೂ ಕಡಿತದ ಚಟಕ್ಕೆ ಬಿದ್ದಿದ್ದಾರೆ. ರಾತ್ರಿ ಕುಡಿದು ಬಂದು ಹೆಂಡತಿಯರನ್ನು ಮನ ಬಂದಂತೆ ಹೊಡೆಯುತ್ತಾರೆ. ಹೀಗಾಗಿ ರಾತ್ರಿ ನನ್ನ ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ನನ್ನ ಜತೆಗೆ ಮಲಗಿಸಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ದಯವಿಟ್ಟು ನಮ್ಮ ಗ್ರಾಮದಲ್ಲಿನ ಅಕ್ರಮ ಮದ್ಯದಂಗಡಿಗಳನ್ನು ಬಂದ್ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ. | ನಾಗಮ್ಮ ಮುಗಳಿಕಟ್ಟಿ ಸ್ಥಳೀಯ ನಿವಾಸಿ