ಬಂಟ್ವಾಳ ಶಾಸಕ ರಾಜೇಶ್ ನೖಾಕ್ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಬಗ್ಗೆ ಪಂಚಾಯಿತಿ ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳ ಸಭೆ ನಡೆಯಿತು. ತಹಸೀಲ್ದಾರ್ ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಉಪಸ್ಥಿತರಿದ್ದರು. 
ಜಿಲ್ಲೆ

ಜೆಜೆಎಂ ಲೋಪಕ್ಕೆ ಅಧಿಕಾರಿಗಳೇ ಹೊಣೆ

Sandeep K

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಜೇಶ್ ನೖಾಕ್ ಎಚ್ಚರಿಕೆ
  • ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ

ಬಂಟ್ವಾಳ: ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲಜೀವನ್ ಮಿಷನ್(ಜೆಜೆಎಂ)ನಂತಹ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದರೂ ಜನರಿಗೆ ಉಪಯೋಗಕ್ಕಿಲ್ಲದಂತಾದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವುದಾಗಿ ಶಾಸಕ ರಾಜೇಶ್ ನೖಾಕ್ಎಚ್ಚರಿಕೆ ನೀಡಿದರು.

ಬಿ.ಸಿ.ರೋಡ್‌ನಲ್ಲಿರುವ ತಾಲೂಕು ಪಂಚಾಯಿತಿಯ ಎಸ್‌ಜೆಸ್‌ಆರ್‌ವೈ ಸಭಾಂಗಣದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಪಂಚಾಯಿತಿ ಆಡಳಿತಾಧಿಕಾರಿಗಳು, ಪಿಡಿಒ ಹಾಗೂ ಇತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದರು. ಜೆಜೆಎಂ ಯೋಜನೆ ಸಂಪೂರ್ಣ ವರದಿ ನೀಡಬೇಕು. ನಾವು ಕೇವಲ ಯೋಜನೆ ಅನುಷ್ಠಾನಗೊಳಿಸುವುದು ಮಾತ್ರ ಅಲ್ಲ. ಜನರಿಗೆ ಆಗುವ ತೊಂದರೆ ಬಗ್ಗೆಯೂ ಗೊತ್ತಾಗಬೇಕು ಎಂದು ಜೆಜೆಎಂ ಇಂಜಿನಿಯರ್ ಜಗದೀಶ್ ನಿಂಬಳ್ಕರ್ ಅವರಿಗೆ ಸೂಚಿಸಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ

ಬಾಳ್ತಿಲ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಯಿದ್ದರೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಪಿಡಿಒ ಗಮನ ಸೆಳೆದರು. ವಿದ್ಯುತ್ ವ್ಯತ್ಯಯದಿಂದ ಸಮರ್ಪಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಜೆಜೆಎಂ ಇಂಜಿನಿಯರ್ ಪ್ರತಿಕ್ರಿಯಿಸಿದಾಗ ಮಾರ್ಚ್ ತಿಂಗಳ 30 ದಿನಗಳಲ್ಲಿ 11 ಗಂಟೆ ಹಾಗೂ ಏಪ್ರಿಲ್ ತಿಂಗಳಲ್ಲಿ 16 ಗಂಟೆ ಮಾತ್ರ ವಿದ್ಯುತ್ ಕಡಿತವಾಗಿದೆ ಎಂದು ಮೆಸ್ಕಾಂ ಎಇಇ ನಾರಾಯಣ ಭಟ್ ಲೆಕ್ಕ ನೀಡಿದರು. ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿದ್ದರೆ ಟ್ಯಾಂಕ್‌ನಲ್ಲಿ ತುಂಬಿದ ನೀರು ಅರ್ಧಗಂಟೆಯಲ್ಲಿ ಖಾಲಿಯಾಗುತ್ತದೆ. ಮತ್ತೆ ತುಂಬಲು ಎರಡು ಗಂಟೆ ಬೇಕಾಗುತ್ತದೆ ಎಂದು ಜೆಜೆಎಂ ಇಂಜಿನಿಯರ್ ತಾಂತ್ರಿಕ ಸಮಸ್ಯೆ ಮುಂದಿಟ್ಟರು. ಶಾಸಕ ರಾಜೇಶ್ ನಾಕ್, ಕುಡಿಯುವ ನೀರು ಪೂರೈಕೆ ಪ್ರಥಮ ಆದ್ಯತೆಯ ನೆಲೆಯಲ್ಲಿ ಮಾಡಬೇಕು. ತಾಂತ್ರಿಕ ಸಮಸ್ಯೆಗಳನ್ನು ಅಧಿಕಾರಿಗಳು ಪರಸ್ಪರ ಬಗೆಹರಿಸಬೇಕು ಎಂದು ಸೂಚಿಸಿದರು.

ಬಾಳ್ತಿಲ ಗ್ರಾ.ಪಂ.ನ ಪೂರ್ಲಿಪಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ಗೆ ಹಾನಿಯಾಗಿದೆ. ಅಮ್ಟಾಡಿ ಗ್ರಾಮದ ಮೇಗಿನ ಕೂರಿಯಾಳದಲ್ಲಿ ಕೊಳವೆ ಬಾವಿ ಒಣಗಿದೆ. ಸಜೀಪಮುನ್ನೂರು ಗ್ರಾಮದ ಶಾಂತಿನಗರ ಪರಿಸರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕಳ್ಳಿಗೆ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಸಮಸ್ಯೆ ಎದುರಾಗಿದೆ. ನರಿಕೊಂಬು ಗ್ರಾಮದ ಮೊಗರ್ನಾಡು ಹಾಗೂ ಮಾಣಿಮಜಲು ಪ್ರದೇಶಕ್ಕೆ ಕೊಳವೆ ಬಾವಿ ಬೇಕಾಗಿದೆ. ಸಂಗಬೆಟ್ಟು ಗ್ರಾಮದ ಕಲ್ಕೂರಿ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಅರಳ ಗ್ರಾಮದ ಅಲ್ಮುಡೆ, ಕುಟ್ಟಿಕಳ ಪರಿಸರದಲ್ಲಿ ನೀರಿನ ಸಮಸ್ಯೆ ಇದೆ. ಕರಿಯಂಗಳ ಗ್ರಾಮದ ಪೊಳಲಿಯಲ್ಲಿರುವ ಬಾವಿಯಲ್ಲಿ ಯಥೇಚ್ಛ ನೀರಿದ್ದು ಕೆಸರು ತೆಗೆಸಬೇಕಾಗಿದೆ. ಕನ್ಯಾನ ಗ್ರಾಮದ ಆರು ಕಡೆಗಳಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಮಂಚಿ ಗ್ರಾಮದ ನಾಡಾಜೆಯಲ್ಲಿ ನೀರಿನ ಸಮಸ್ಯೆ ಇದೆ. ಪತ್ತುಮುಡಿಯಲ್ಲಿ ಜೆಜೆಎಂ ಯೋಜನೆಗೆ ವಿದ್ಯುತ್ ಸಂಪರ್ಕ ಆಗಿಲ್ಲ. ಸಜೀಪಮೂಡ ಗ್ರಾಮದ ಪಟ್ಟುಗುಡ್ಡೆಯಲ್ಲಿ ನೀರಿದ್ದರೂ ಕುಡಿಯಲು ಯೋಗ್ಯವಾಗಿಲ್ಲ. ಕೇಪು ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ನೀರಿಲ್ಲದೆ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಅಲ್ಲಿನ ಪಿಡಿಒಗಳು ಶಾಸಕರಿಗೆ ವರದಿ ನೀಡಿದರು.

ತಹಸೀಲ್ದಾರ್ ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಉಪಸ್ಥಿತರಿದ್ದರು.

ಮಳೆಕೊಯ್ಲು ಅಳವಡಿಸದಿದ್ದರೆ ಕಟ್ಟುನಿಟ್ಟಿನ ಕ್ರಮ

ಕೊಳವೆ ಬಾವಿಗೆ ಗ್ರಾ.ಪಂ.ನಿಂದ ಅನುಮತಿ ಪಡೆಯುವ ಸಂದರ್ಭ ಕೊಳವೆ ಬಾವಿಗೆ ಮಳೆ ನೀರು ಇಂಗಿಸುವ ವ್ಯವಸ್ಥೆ ಅಳವಡಿಸಲು ಸೂಚಿಸಬೇಕು. ಮೂರು ತಿಂಗಳ ಕಾಲಾವಕಾಶ ನೀಡಿ, ಬಳಿಕ ಮಾಡದಿದ್ದರೆ ಅಂಥವರ ಮೇಲೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೃಷಿಗೆ ನೀರು ಬಳಕೆ ಮಾಡುವುದರಿಂದ ನೀರು ವ್ಯರ್ಥವಾಗುವುದಿಲ್ಲ. ಅವು ಮತ್ತೆ ಒರತೆಯ ರೂಪದಲ್ಲಿ ಕೆರೆ, ಬಾವಿಯನ್ನು ಸೇರುತ್ತದೆ. ಆದ್ದರಿಂದ ಕೃಷಿಗೆ ನೀರು ಬಳಸಲು ಅಡ್ಡಿಪಡಿಸಬಾರದು ಎಂದು ಶಾಸಕರು ಸೂಚಿಸಿದರು.

ಜಕ್ರಿಬೆಟ್ಟುವಿನಿಂದ ಚೆನ್ನೈತ್ತೋಡಿಗೆ ಪೂರೈಕೆ

ಚೆನ್ನೈತ್ತೋಡಿ ಗ್ರಾಪಂ ವ್ಯಾಪ್ತಿಗೆ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ನೀರು ಪೂರೈಕೆಯಾಗದೆ ಇರುವುದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ಇದ್ದು ಪಂಚಾಯಿತಿ ವತಿಯಿಂದ ಎರಡು ವಾಹನಗಳಲ್ಲಿ ನೀರಿನ ಪೂರೈಕೆ ಮಾಡಲಾಗುತ್ತಿದೆ ಎಂದು ಪಿಡಿಒ ಸಭೆಯ ಗಮನಕ್ಕೆ ತಂದರು. ಬಂಟ್ವಾಳದ ಜಕ್ರಿಬೆಟ್ಟು ಡ್ಯಾಂನ ಜಾಕ್‌ವೆಲ್‌ನಿಂದ ಚೆನ್ನೈತ್ತೋಡಿಗೆ ನೀರು ಪೂರೈಕೆ ಮಾಡುವ ಸಾಧ್ಯತೆಯ ಬಗ್ಗೆ ಪರಿಶೀಲಿಸುವಂತೆ ಶಾಸಕ ರಾಜೇಶ್ ನೖಾಕ್ ಸೂಚಿಸಿದಾಗ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಇಂಜಿನಿಯರ್ ಕೃಷ್ಣ ಮಾನಪ್ಪ ಪ್ರತಿಕ್ರಿಯಿಸಿ, ಪಂಜಿಕಲ್ಲುವಿನಲ್ಲಿ ಟ್ಯಾಂಕ್ ಮಾಡಿ ಅಲ್ಲಿಗೆ ಜಕ್ರಿಬೆಟ್ಟುವಿನಿಂದ ನೀರು ಸರಬರಾಜು ಮಾಡಿ, ಚೆನ್ನೈತ್ತೋಡಿ, ವಾಮದಪದವು, ಕುಕ್ಕಿಪ್ಪಾಡಿ ಗ್ರಾಮಗಳಿಗೆ ನೀರು ಕೊಡಲು ಸಾಧ್ಯವಿದೆ ಎಂದು ತಿಳಿಸಿದರು.

ಮಳೆಗಾಲಕ್ಕೆ ಸಿದ್ಧರಾಗಿ

ಮಳೆಗಾಲ ಆರಂಭಗೊಳ್ಳುತ್ತಿದ್ದು ಚರಂಡಿಯ ಹೂಳು, ಕಳೆಗಿಡ ತೆಗೆದು ಸ್ವಚ್ಛಗೊಳಿಸುವಂತೆ ಶಾಸಕರು ಪಿಡಿಒಗಳಿಗೆ ಸೂಚಿಸಿದರು. ಚರಂಡಿಯಲ್ಲಿ ಹೂಳು, ಕಸ ತುಂಬಿಕೊಂಡಿರುವುದರಿಂದ ಕೃತಕ ನೆರೆ ಸೃಷ್ಟಿಯಾಗುತ್ತವೆ. ಕುಸಿಯುವ ಹಂತದ ಕಟ್ಟಡಗಳ ಬಗ್ಗೆ ಗಮನ ಹರಿಸಬೇಕು. ವಿಶೇಷವಾಗಿ ಅಂಗನವಾಡಿ ಕೇಂದ್ರಗಳ ಬಗ್ಗೆ ಕಾಳಜಿ ವಹಿಸಿ. ಶಾಲೆಗಳು ಕೆಲವೇ ದಿನಗಳಲ್ಲಿ ಪುನಾರಂಭಗೊಳ್ಳಲಿದ್ದು ಕಟ್ಟಡ ಮತ್ತಿತರ ಮೂಲ ವ್ಯವಸ್ಥೆಗಳ ಬಗ್ಗೆ ಗಮನ ಹರಿಸಲು ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿ ಎಂದು ಬಿಇಒ ಅವರಿಗೆ ಸೂಚಿಸಿದರು.