ಜಿಲ್ಲೆ

ಸರ್ಕಾರಿ ಭೂಮಿ ಕಬಳಿಸುತ್ತಿರುವ ಅಧಿಕಾರಿಗಳು: ಶಾಸಕ ಎಚ್.ಡಿ. ರೇವಣ್ಣ ಗಂಭೀರ ಆರೋಪ

ಹಾಸನ: ನಗರದ ವಿವಿಧೆಡೆ ಇರುವ ಸರ್ಕಾರಿ ಜಾಗವನ್ನು ಗುರುತಿಸಿ ಅವುಗಳಿಗೆ ಸರ್ಕಾರಿ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆಯ ಹುನ್ನಾರ ನಡೆದಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ತಾಲೂಕಿನ ದೊಡ್ಡಕೊಂಡಗುಳ ಗ್ರಾಮದ ಸರ್ವೆ ನಂಬರ್ 7,32,31,34,54, 07ರಲ್ಲಿ ಸುಮಾರು 97 ಎಕರೆ ಸರ್ಕಾರಿ ಜಮೀನಿನಲ್ಲಿ ಯಾವುದೇ ಮೂಲ ದಾಖಲಾತಿಗಳು ಇಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಲು ಮುಂದಾಗಿದ್ದಾರೆ. ಈ ಜಾಗದಲ್ಲಿ ಯಾರೊಬ್ಬರೂ ಸಾಗುವಳಿಯಲ್ಲಿ ಇಲ್ಲದಿದ್ದರೂ ಕೇವಲ ಹೆಸರುಗಳನ್ನು ನಮೂದಿಸಿ ಒಬ್ಬೊಬ್ಬರಿಗೆ ತಲಾ 1, 2 ಎಕರೆಯಂತೆ ಹಂಚಿಕೆ ಮಾಡಲಾಗಿದೆ. ತಾಲೂಕು ಕಚೇರಿಯಲ್ಲಿ ಕೆಲಸ ಮಾಡುವ ಕೆಲ ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳ ಜತೆ ಶಾಮೀಲಾಗಿ ಸರ್ಕಾರಿ ಜಾಗಕ್ಕೆ ನಕಲಿ ದಾಖಲಿಗಳನ್ನು ಸೃಷ್ಟಿಸಿ ದುರಸ್ತಿ ಮಾಡಿಸುವ ಹುನ್ನಾರ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಅಧಿಕಾರಿಗಳೇ ಕೈ ಪಹಣಿ ರಚಿಸಿ ತಮಗೆ ಇಷ್ಟ ಬಂದವರ ಹೆಸರುಗಳನ್ನು ಬರೆದುಕೊಂಡು ದುರಸ್ತಿ ಆಗದಿದ್ದರೂ ಲೇಔಟ್ ಮಾಡಲು ಅನುಮತಿ ನೀಡಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು. ಜತೆಗೆ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಹಾಸನ ನಗರದ ಹೊರವಲಯದಲ್ಲಿ ನಡೆಯುತ್ತರುವ ವಿಮಾನ ನಿಲ್ದಾಣ ಕಾಮಗಾರಿ ಮೂಲ ಮಾದರಿಯಲ್ಲೇ ನಡೆಯಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಜಿಲ್ಲೆಯ ಬೆಳವಣಿಗೆ ದೃಷ್ಟಿಯಿಂದ ವಿಶಾಲವಾದ ವಿಮಾನ ನಿಲ್ದಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು. ವಿಶ್ವ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ಹೊಂದಿರುವ ಜಿಲ್ಲೆಗೆ ವಿದೇಶದ ನಂಟು ಹಾಗೂ ಹೊರ ರಾಜ್ಯಗಳಿಗೆ ತೆರಳಲು ಹಾಗೂ ಹಾಸನ ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳನ್ನು ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ರಫ್ತು ಮಾಡಲು ಪ್ರಯಾಣಿಕರ ಹಾಗೂ ಕಾರ್ಗೋ ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವ ರೀತಿ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಹೇಳಿದರು.