ವಿಜಯವಾಣಿ ಸುದ್ದಿಜಾಲ ಧಾರವಾಡ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ತೆರಳಬೇಕೆಂಬ ಆಶಯ ಎಲ್ಲರಲ್ಲಿ ಇರುವುದು ಸಹಜ. ಅಧಿಕೃತ ಆಮಂತ್ರಣ ಸಿಕ್ಕು ಪಾಲ್ಗೊಳ್ಳಲು ಅದೃಷ್ಟವೇ ಬೇಕು. ಅಂತಹ ಅದೃಷ್ಟ ಧಾರವಾಡದವರಿಗೂ ಸಿಕ್ಕಿರುವುದು ಹೆಮ್ಮೆಯ ಸಂಗತಿ. ನಗರದ ಪ್ರಸಿದ್ಧ ವೈದ್ಯರಾದ ಡಾ. ಎಸ್.ಆರ್. ರಾಮನಗೌಡರ ಹಾಗೂ ಹೆಬ್ಬಳ್ಳಿ ಶ್ರೀಕ್ಷೇತ್ರದ ದತ್ತಾವಧೂತ ಮಹಾರಾಜರಿಗೆ ಈ ಅವಕಾಶ ಸಿಕ್ಕಿದೆ. ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ 3000 ಗಣ್ಯರಿಗೆ ಮಾತ್ರ ಅವಕಾಶ ಇದೆ. ಅದರಲ್ಲಿ ಧಾರವಾಡದವರೂ ಇರುವುದು ನಗರದ ಜನತೆಗೆ ಸಂತಸದ ವಿಷಯ. ಜ. 22ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಡಾ. ಎಸ್.ಆರ್. ರಾಮನಗೌಡರ ಹಾಗೂ ದತ್ತಾವಧೂತ ಮಹಾರಾಜರಿಗೆ ಕೆಲ ದಿನಗಳ ಹಿಂದಷ್ಟೇ ಅಧಿಕೃತ ಆಮಂತ್ರಣ ಬಂದಿದೆ. ಡಾ. ಎಸ್.ಆರ್. ರಾಮನಗೌಡರ ವೈದ್ಯಕೀಯ ಸೇವೆ ಜತೆಗೆ ರಾಷ್ಟ್ರ ಸೇವೆಯಲ್ಲಿ ತೊಡಗಿದ್ದಾರೆ. ಸದ್ಯ ಅವರು ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ರಾಮನಗೌಡರ ಅವರಿಗೆ ಪ್ರಾಣ ಪ್ರತಿಷ್ಠಾಪನೆ ಪೂಜೆಯಲ್ಲಿ ದಂಪತಿ ಸಮೇತ ಪಾಲ್ಗೊಳ್ಳುವ ಆಹ್ವಾನವೂ ಬಂದಿತ್ತು. ಆದರೆ ವೈದ್ಯರ ಪತ್ನಿಗೆ ಅನಾರೋಗ್ಯದ ಕಾರಣ ಅವರೊಬ್ಬರೇ ಪಾಲ್ಗೊಳ್ಳುತ್ತಿದ್ದಾರೆ. ಇದು ಕುಟುಂಬದ ಸದಸ್ಯರಲ್ಲೂ ಸಂತಸ ತಂದಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಧಿಕೃತ ಆಮಂತ್ರಣ ಬಂದಿರುವುದು ಖುಷಿ ತಂದಿದೆ. ಈ ಸಂತಸದ ಕ್ಷಣವನ್ನು ಶಬ್ದಗಳಲ್ಲಿ ಹೇಳುವುದು ಅಸಾಧ್ಯ. ಜೀವನದಲ್ಲಿ ಇಂತಹ ಶುಭ ಮುಹೂರ್ತ ಬರುವುದು ಅಕಲ್ಪ ಎನಿಸುತ್ತಿದೆ. ನಾನು ಹಾಗೂ ಇನ್ನೂ ಇತರರು ಜ. 21ರಂದು ಹುಬ್ಬಳ್ಳಿಯಿಂದ ವಿಮಾನ ಮೂಲಕ ತೆರಳಲಿದ್ದೇವೆ ಎಂದು ಡಾ. ಎಸ್.ಆರ್. ರಾಮನಗೌಡರ ಸಂತಸ ವ್ಯಕ್ತಪಡಿಸಿದರು.