ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯ ದೊಡ್ಡತುಮಕೂರು ಗ್ರಾಮದಲ್ಲಿ ಇತ್ತೀಚೆಗೆ ಖಾಸಗಿಯಾಗಿ ಖರೀದಿಸಿದ ಕೀಟನಾಶಕ ಬಳಕೆಯಿಂದ ಟೊಮ್ಯಾಟೊ ಬೆಳೆ ನಾಶವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜ್ಞಾನಿಗಳ ತಂಡದೊಂದಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಬೆಳೆಗೆ ಬಳಸಿದ ಖಾಸಗಿ ಕೀಟನಾಶಕದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಪ್ರಾಥಮಿಕ ಪರೀಕ್ಷೆಯಲ್ಲಿ ಹೆವೀ ಡೋಸೇಜ್ ಬಳಕೆಯಾಗಿರುವ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ವರದಿ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.
ಕಂಪನಿ ಹೆಸರಿಲ್ಲದೆ ವಂಚನೆ: ರೈತನಿಗೆ ವಿತರಿಸಿರುವ ಕೀಟನಾಶಕ ಬಾಟಲಿಗಳ ಮೇಲೆ ಕಂಪನಿ ಹೆಸರನ್ನೇ ಉಲ್ಲೇಖಿಸಿಲ್ಲ ಎನ್ನಲಾಗಿದೆ. ಕೀಟನಾಶಕದ ಹೆಸರು ಬಳಕೆಯ ಡೋಸೇಜ್ ಮಾಹಿತಿಯಷ್ಟೇ ಉಲ್ಲೇಖವಿದೆ. ಅದೂ ಪ್ರಮಾಣಿಕೃತವಾಗಿರುವಂತಿಲ್ಲ ಎಂಬುದು ಅಧಿಕಾರಿಗಳ ಪರಿಶೀಲನೆಯಲ್ಲಿ ಕಂಡುಬಂದಿದೆ. ಎರಡು ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿ ದ್ರವರೂಪದ ಕೀಟನಾಶಕ ನೀಡಲಾಗಿದೆ. ಮತ್ತೊಂದನ್ನು ಪುಡಿ ರೂಪದಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ನೀಡಲಾಗಿತ್ತು. ಇದು ಪ್ರಮಾಣೀಕೃತವಾಗಿ ಕೀಟನಾಶಕ ವಿತರಿಸುವ ಮಾದರಿಯಲ್ಲ ಎಂಬುದು ಅಧಿಕಾರಿಗಳ ಅಭಿಮತ.
ಖಾಸಗಿ ಕಂಪನಿಯ ಪ್ರತಿನಿಧಿಗಳು ರೈತನನ್ನು ಸಂಪರ್ಕಿಸಿ ಉತ್ತಮ ಬೆಳೆ ಬರುವುದಾಗಿ ನಂಬಿಸಿ ಪ್ರಾಯೋಗಿಕವಾಗಿ ಕೀಟನಾಶಕ ಬಳಸುವಂತೆ ಮನವೊಲಿಸಿದ್ದರು ಎನ್ನಲಾಗಿದೆ. ಇದನ್ನು ನಂಬಿದ ರೈತ ಕೀಟನಾಶಕ ಬಳಸಿದ್ದು, ಸಲು ಕೈಗೆ ಬರುವ ಸಮಯದಲ್ಲಿ ಬೆಳೆ ನಾಶವಾಗಿದೆ.
ರೈತನ ಅಳಲು: ಕೀಟನಾಶಕ ಸಿಂಪಡಣೆಯಿಂದ ಉತ್ತಮ ಲಿತಾಂಶ ದೊರೆಯುತ್ತದೆ ಎಂದು ಹೇಳಿ ಖಾಸಗಿ ಕಂಪನಿಯವರು ಕೀಟ ನಾಶಕ ನೀಡಿದ್ದರು. ಅದರಂತೆ ಕೀಟನಾಶಕ ಬಳಕೆ ಮಾಡಲಾಗಿತ್ತು. ಆದರೆ 1 ಎಕರೆಯಲ್ಲಿ ಅರ್ಧ ಎಕರೆಯಷ್ಟು ಟೊಮ್ಯೊಟೊ ಬೆಳೆ ನಾಶವಾಗಿದೆ. ಇನ್ನೇನು ಕಾಯಿ ಬರಬೇಕು ಎನ್ನುವಷ್ಟರಲ್ಲಿ ಗಿಡಗಳು ಒಣಗಿವೆ ಎಂಬುದು ರೈತನ ಆರೋಪವಾಗಿದೆ.
ಖಾಸಗಿ ಬಗ್ಗೆ ಇರಲಿ ಎಚ್ಚರ: ಪ್ರಸ್ತುತ ಟೊಮ್ಯಾಟೊ ಬೆಳೆಗೆ ಚಿನ್ನದ ಬೆಲೆ ಬಂದಿದೆ, ರೈತರು ಟೊಮ್ಯಾಟೊ ಬೆಳೆಯಲು ಹೆಚ್ಚು ಉತ್ಸುಕರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಕಂಪನಿಯವರು ರೈತರಿಗೆ ಕೀಟನಾಶಕ ಮಾರಲು ಯತ್ನಿಸುತ್ತಿದ್ದಾರೆ. ಇನ್ನೂ ಕೆಲ ಕಂಪನಿಗಳು ಉತ್ಪಾದನೆಯನ್ನು ಪ್ರಯೋಗ ಮಾಡಲು ಇಂಥ ಮುಗ್ಧ ರೈತರನ್ನು ಬಲಿಪಶು ಮಾಡುತ್ತಿವೆ ಎಂಬ ಮಾತು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿರುವ ಅಧಿಕಾರಿಗಳು ಖಾಸಗಿಯಿಂದ ಖರೀದಿಸುವಾಗ ರೈತರು ಪ್ರಾಮಾಣೀಕರಿಸಿ ನೋಡಬೇಕು ಎಂದು ತಿಳಿ ಹೇಳಿದ್ದಾರೆ.
ಪರಿಹಾರ ಗೊಂದಲ: ಸುಮಾರು 1 ಎಕರೆಯಷ್ಟರಲ್ಲಿ ಅರ್ಧ ಎಕರೆಯಷ್ಟು ಟೊಮ್ಯೊಟೊ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ದರದಲ್ಲಿ ಲಕ್ಷಾಂತರ ರೂ. ನಷ್ಟವಾಗಿದೆ ಏತನ್ಮಧ್ಯೆ ಪರಿಹಾರ ಸಂಬಂಧ ಗೊಂದಲವೂ ಏರ್ಪಟ್ಟಿದೆ, ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಬರುವುದಿಲ್ಲ ಎಂಬುದು ಅಧಿಕಾರಿಗಳ ಸ್ಪಷ್ಟನೆ. ಇದು ಖಾಸಗಿ ಕಂಪನಿ ಹಾಗೂ ರೈತನ ನಡುವೆ ನಡೆದಿರುವ ವ್ಯವಹಾರವಾಗಿದ್ದು, ಕಂಪನಿ ವಿರುದ್ಧ ಕಾನೂನು ಮೊರೆ ಹೋಗಬೇಕಾಗಬಹುದು ಎಂಬುದು ಅಧಿಕಾರಿಗಳ ಸಲಹೆಯಾಗಿದೆ.