devanahalli tax office 
ಜಿಲ್ಲೆ

ಅಧಿಕಾರಿಗಳ ದರ್ಪಕ್ಕೆ ರೈತರ ಕಣ್ಣೀರು!

ಶಿವರಾಜ.ಎಂ

ಮೆಣಸಿನ ಕಾಯಿ ಬಿಡುಗಡೆಗೆ ಮೊರೆ

ಲಾರಿ ಜಪ್ತಿ ಮಾಡಿ ವಾಣಿಜ್ಯ ತೆರಿಗೆ ಅಧಿಕಾರಿಗಳು ನಾಪತ್ತೆ?


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕರ್ತವ್ಯ ಪಾಲನೆ ನೆಪದಲ್ಲಿ ಅಧಿಕಾರಿಗಳು ಸಾರ್ವಜನಿಕರ ಮೇಲೆ ದರ್ಪ ತೋರುವುದು, ಜನರಿಂದ ಕಣ್ಣೀರು ಹಾಕಿಸುವುದು, ಮಾಮಾಲು ವಸೂಲಿಗೆ ಇನ್ನಿಲ್ಲದ ವರಸೆ ತೋರಿಸುವುದು ಸಾಮಾನ್ಯವಾಗಿದೆ. ಇಂಥಹದ್ದೇ ಪ್ರಕರಣವೊಂದು ದೇವನಹಳ್ಳಿಯಲ್ಲಿ ನಡೆದಿದ್ದು ಮೆಣಸಿನಕಾಯಿ ಮಾಲು ಉಳಿಸಿಕೊಳ್ಳಲು ರೈತರು ಕಣ್ಣೀರು ಹಾಕುತ್ತಿದ್ದಾರೆ.
302 ಚೀಲ ಮೆಣಸಿನ ಕಾಯಿ ಲುಕ್ಸಾನು: ಬ್ಯಾಡಗಿ, ಕಲಬುರ್ಗಿ, ಯಾದಗಿರಿಯಲ್ಲಿ ಶೀತಲೀಕರಣ ಘಟಕಗಳು ಭರ್ತಿಯಾಗಿದ್ದರಿಂದ, ತಮಿಳುನಾಡಿನ ಧರ್ಮಪುರಿಯಲ್ಲಿರುವ ಶೀತಲೀಕರಣ ಘಟಕಕ್ಕೆ 302 ಚೀಲ ಬ್ಯಾಡಗಿ ಮೆಣಸಿಕಾಯಿಯನ್ನು ಸಾಗಣೆ ಮಾಡುವಾಗ ದೇವನಹಳ್ಳಿ ಬಳಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಲಾರಿಯನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ. ಮಂಗಳವಾರ (ಏ.2) ಬೆಳಗಿನ ಜಾವ ವಾಹನವನ್ನು ತಡೆದ ಅಧಿಕಾರಿಗಳು, ದಾಖಲೆಗಳು ಸರಿಯಿಲ್ಲ ಎಂಬ ನೆಪ ಹೇಳಿ ವಾಹನ ಸಮೇತ, ಮೆಣಸಿನಕಾಯಿ ಲೋಡನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ಬ್ಯಾಡಗಿ ಮೆಣಸಿನಕಾಯಿ ಸಾಗಿಸುತ್ತಿದ್ದ, ರೈತರ ವಾಹನವನ್ನು ವಶಕ್ಕೆ ಪಡೆದು, ಮೂರು ದಿನ ಕಳೆದರೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಚೇರಿಗೆ ಬರದ ಪರಿಣಾಮ, ಬಿಸಿಲ ತಾಪಕ್ಕೆ ಮೆಣಸಿನಕಾಯಿ ಕಪ್ಪು ಬಣ್ಣಕ್ಕೆ ತಿರುಗಿ ಹಾಳಾಗುತ್ತಿರುದು ರೈತರನ್ನು ಕಂಗೆಡಿಸಿದೆ. ಅಧಿಕಾರಿಗಳ ವರ್ತನೆಯಿಂದ ಕಂಗಾಲಾಗಿರುವ ರೈತರು ದೈನೇಸಿಯಿಂದ ಕಂಡ ಕಂಡವರ ಬಳಿ ಅಲವತ್ತುಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಗಮನ ನೀಡದ ಅಧಿಕಾರಿಗಳು ಜಪ್ತಿ ಮಾಡಿದ ದಿನದಿಂದ ಅತ್ತ ಕಡೆ ಸುಳಿದಿಲ್ಲ ಎನ್ನಲಾಗಿದ್ದು, ಮೆಣಸಿನಕಾಯಿ ಉಳಿಸಿಕೊಡಿ ಎಂದು ರೈತರು ಕಣ್ಣೀರು ಸುರಿಸುತ್ತಿದ್ದಾರೆ.
ದೇವನಹಳ್ಳಿಯಲ್ಲಿ ಪಾರ್ಕಿಂಗ್: ವಾಹನದಲ್ಲಿದ್ದ ರೈತರು ಅವರ ಜಮೀನು ಪತ್ರಗಳು, ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ನೀಡಿರುವ ಮನವಿ ಪತ್ರವನ್ನು ಅಧಿಕಾರಿಗಳ ಪರಿಶೀಲನೆಗೆ ನೀಡಿದರೂ, ಅದನ್ನು ಪರಿಗಣಿಸದೇ ವಾಹನದ ದಾಖಲಾತಿಗಳನ್ನು ವಶಕ್ಕೆ ಪಡೆದು ,ದೇವನಹಳ್ಳಿಯ ವಾಣಿಜ್ಯ ತೆರಿಗೆ ಕಚೇರಿ ಆವರಣದಲ್ಲಿ ಮೆಣಸಿನಕಾಯಿ ತುಂಬಿದ ಗಾಡಿಯನ್ನು ನಿಲ್ಲಿಸಿ ಹೋಗಿದ್ದಾರೆ ಎನ್ನಲಾಗಿದೆ. ವರ್ಷಾಪೂರ್ತಿ ಬೆಳೆದ ಬೆಳೆಯನ್ನು ನೋಡಿಕೊಂಡು, ಊಟ, ನೀರು ಬಿಟ್ಟು ರೈತರು ವಾಣಿಜ್ಯ ತೆರಿಗೆ ಇಲಾಖೆಯ ಆವರಣದಲ್ಲಿಯೇ ರಾತ್ರಿ ಇಡೀ ಕಳೆದಿದ್ದಾರೆ. ಊಟ ಕೊಡಿಸಲು ಸ್ಥಳೀಯರು ನೆರವಿಗೆ ಧಾವಿಸಿದರೇ, ಅವರ ಕಾಲುಗಳನ್ನು ಮುಗಿದು ತಮ್ಮ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿಯನ್ನು ಬಿಡಿಸಿಕೊಡಿ ಎಂದು ಅಂಗಲಾಚ್ಚುತ್ತಿರುವ ದೃಶ್ಯ ಮನಕಲುಕುವಂತಿದೆ.

ಕೋರಮಂಗಲ ಎಲ್ಲಿದೆ ಗೊತ್ತಿಲ್ಲ: ಮಂಗಳವಾರ ಮುಂಜಾನೆ ಬೆಂಗಳೂರಿನ ಕೋರಮಂಗಲ ವಾಣಿಜ್ಯ ಕಚೇರಿಯ ವಿಜಿಲೆನ್ಸ್ ಅಧಿಕಾರಿಗಳು ಮೆಣಸಿನಕಾಯಿ ಜಪ್ತಿ ಮಾಡಿ, ಇಲ್ಲಿಗೆ ತಂದು ಬಿಟ್ಟಿದ್ದಾರೆ. ಈ ವಿಚಾರದಲ್ಲಿ ದೇವನಹಳ್ಳಿ ಕಚೇರಿಗೆ ಯಾವುದೇ ಸಂಬಂಧವಿಲ್ಲ. ಯಾವ ಅಧಿಕಾರಿ ಪ್ರಕರಣ ದಾಖಲು ಮಾಡಿದ್ದಾರೋ ಅವರೇ ಅದನ್ನು ನಿರ್ವಹಣೆ ಮಾಡುತ್ತಾರೆ. ಏನಿದ್ದರೂ ಕೋರಮಂಗಲಕ್ಕೆ ಹೋಗಿ ವಿಚಾರಿಸಿ ಎಂದು ದೇವನಹಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಅಧಿಕಾರಿಗಳು ಏನು ಮಾಡಬೇಕು ಎಂದು ತಿಳಿಸುತ್ತಿಲ್ಲ. ಕೋರಮಂಗಲ ಎಲ್ಲಿದೆ ಎಂಬುದು ನಮಗೆ ಗೊತ್ತಿಲ್ಲ. ನಮ್ಮ ನೋವು ಏನಿದ್ದರೂ ಬೆಳೆದ ಬೆಳೆಯನ್ನು ರಕ್ಷಿಸಬೇಕು ಎಂದು, ಇದನ್ನೇ ನಂಬಿಕೊಂಡು ಊರಿನಲ್ಲಿ ಕುಟುಂಬಗಳು ಎದುರು ನೋಡುತ್ತಿದೆ ಎಂದು ರೈತರು ಅಳಲು ತೋಡಿಕೊಂಡರು.

ಅಧಿಕಾರಿಗಳು ನಾಪತ್ತೆ: ಮೆಣಸಿನಕಾಯಿ ಸಲು ಬಿಡಿಸಿಕೊಡುವಂತೆ ಅಂಗಲಾಚ್ಚುತ್ತಿದ್ದ ರೈತರ ಸಂಕಷ್ಟ ನೋಡಿ, ಸ್ಥಳೀಯರು ಮೆಣಸಿನಕಾಯಿ ಜಪ್ತಿ ಮಾಡಿದ್ದ ಅಧಿಕಾರಿಗೆ ಪೋನ್ ಮಾಡಿದರೇ ಅಧಿಕಾರಿ ಕರೆ ಸ್ವೀಕರಿಸುತ್ತಿಲ್ಲ. ದೇವನಹಳ್ಳಿಯ ಕಚೇರಿ ಅಧಿಕಾರಿಗಳ ಗಮನಕ್ಕೆ ತಂದರೆ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ವರ್ತಿಸುತ್ತಿದ್ದಾರೆ ಎನ್ನಲಾಗಿದೆ. ರೈತರ ಕಷ್ಟ ನೋಡಿ ಸ್ಥಳೀಯರು ಹೇಗಾದರೂ ಮಾಡಿ ಸಲು ಬಿಡಿಸಿಕೊಡಬೇಕು ಎಂದು ಹರಸಾಹಸ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಸಾರ್ವಜನಿಕರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.