ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯಾದ್ಯಂತ ಈಗಾಗಲೇ ಕೊರೆಯಿಸಿರುವ ಬೋರ್‌ವೆಲ್‌ಗಳಲ್ಲಿ ನೀರು ಸಿಗದೇ ಇರುವ ಸಂದರ್ಭಗಳಲ್ಲಿ ಅಥವಾ ನೀರು ಬತ್ತಿಹೋಗಿ ಅಳವಡಿಸಿರುವ ಮೋಟರ್, ಪಂಪ್ ಮತ್ತು ಕೇಸಿಂಗ್‌ಗಳನ್ನು ತೆಗೆದಂತಹ ಸಂದರ್ಭಗಳಲ್ಲಿ ಕೂಡಲೇ ಅವುಗಳನ್ನು ಮುಚ್ಚಬೇಕು ಇಲ್ಲವಾದರೆ ಅಂಥ ಜಮೀನಿನ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಎಚ್ಚರಿಕೆ ನೀಡಿದ್ದಾರೆ.
ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ವಿಲವಾದ ಕೊಳವೆಬಾವಿಗಳನ್ನು ಮುಚ್ಚದ ಸಂದರ್ಭದಲ್ಲಿ ಸಣ್ಣ ಮಕ್ಕಳು ಇಂಥ ಕೊಳವೆಬಾವಿಗಳಿಗೆ ಬಿದ್ದು ಅವಘಡ ಸಂಭವಿಸುವ ಪ್ರಕರಣ ಮರುಕಳಿಸುತ್ತಿರುವುದರಿಂದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿಯೂ ಕ್ರಮಕ್ಕೆ ಮುಂದಾಗಿದ್ದು, ರೈತರು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಈ ಬಗ್ಗೆ ಅಧಿಕಾರಿಗಳು ಸರ್ವೇ ನಡೆಸಿ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಇಲ್ಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಮಳೆ ಪ್ರಮಾಣ ಕಡಿಮೆಯಾಗಿದ್ದು, ಅಂತರ್ಜಲ ಬಳಕೆ ಹೆಚ್ಚಾಗಿರುವ ಕಾರಣ ಹಾಗೂ ಭೂವೈಜ್ಞಾನಿಕ ಕಾರಣಗಳಿಂದ ಕೊಳವೆಬಾವಿಗಳು ವಿಫಲವಾಗುತ್ತಿವೆ. ವಿಫಲ ಕೊಳವೆಬಾವಿಗಳನ್ನು ಸರಿಯಾದ ಕಾಲಕ್ಕೆ ಮುಚ್ಚದೇ ಇರುವುದರಿಂದ ಈಗಾಗಲೇ ಅನೇಕ ಅವಘಡಗಳು ಮರುಕಳಿಸುತ್ತಿವೆ ಮುಂದಿನ ದಿನಗಳಲ್ಲಿ ಇಂಥ ಅವಘಡಗಳಿಗೆ ಆಸ್ಪದ ನೀಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಅಪರಾಧ ಪ್ರಕರಣ: ನಿರುಪಯುಕ್ತ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಬೇಕು. ನಗರ, ಪಟ್ಟಣ ಪ್ರದೇಶಗಳಲ್ಲಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯುವ ಮುನ್ನ ಜಮೀನಿನ ಮಾಲೀಕರು ಸಂಬಂಧಪಟ್ಟ ನಗರ, ಪಟ್ಟಣ, ಗ್ರಾಮ ಪಂಚಾಯತಿಗೆ ಕೊಳವೆಬಾವಿ ಕೊರೆಯಿಸುವ ಕುರಿತು ಮಾಹಿತಿ ನೀಡಬೇಕು. ಅದೇ ರೀತಿ ಕೊಳವೆಬಾವಿ ವಿಫಲವಾದಲ್ಲಿ ಸಂಬಂಧಪಟ್ಟ ನಗರ, ಪಟ್ಟಣ, ಗ್ರಾಮ ಪಂಚಾಯತಿಗೆ ಮಾಹಿತಿ ನೀಡಬೇಕು ಇಲ್ಲವಾದರೆ ಇದನ್ನು ಅಪರಾಧ ಎಂದು ಪರಿಗಣಿಸಿ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಡಿಸಿ ತಿಳಿಸಿದರು.
ನಿಗಾವಹಿಸಬೇಕು: ನಗರ, ಪಟ್ಟಣ ಪ್ರದೇಶಗಳಲ್ಲಿನ ಕ್ಷೇತ್ರ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಪಿಡಿಒ, ಗ್ರಾಮ ಪಂಚಾಯತಿ ಕಾರ್ಯದರ್ಶಿ ವಿಲ ಕೊಳವೆಬಾವಿಗಳ ಬಗ್ಗೆ ನಿಗಾವಹಿಸಿ, ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ಪೂರ್ಣ ಪ್ರಮಾಣದಲ್ಲಿ ಮುಚ್ಚಲ್ಪಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು, ಸರಿಯಾದ ರೀತಿಯಲ್ಲಿ ದಾಖಲಿಸಿ ಮಾಹಿತಿ ನೀಡಬೇಕು. ಇದೇ ರೀತಿ ನಗರ ಪಟ್ಟಣ ಪ್ರದೇಶದಲ್ಲಿ ಆಯಾ ಸಂಬಂಧಪಟ್ಟ ವಾಡ್‌ಇಂಜಿನಿಯರ್ ಕ್ರಮ ವಹಿಸಬೇಕು ಎಂದು ತಿಳಿಸಿದರು. ವಿಫಲ ಕೊಳವೆಬಾವಿಗಳನ್ನು ಮುಚ್ಚಿಸಲು ನಗರ, ಪಟ್ಟಣ ಪ್ರದೇಶದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬರುವ ಸ್ಥಳೀಯ ಅಧಿಕಾರಿಗಳಿಗೆ ಸರ್ಕಾರದ ಸುತ್ತೋಲೆಗಳನ್ವಯ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆೆ.
ಪ್ರಾಣಹಾನಿಗೆ ಮಾಲೀಕರೇ ಹೊಣೆ: ವಿಫಲವಾಗಿರುವ ಕೊಳವೆಬಾವಿಗಳು ಇದ್ದಲ್ಲಿ ತಕ್ಷಣವೇ ಮುಚ್ಚಲು ಕ್ರಮ ಕೈಗೊಳ್ಳುವಂತೆ ಹಾಗೂ ಕೊಳವೆಬಾವಿ ಮುಚ್ಚದೇ ಇರುವ ಮತ್ತು ಜಮೀನು ಮಾಲೀಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸುವುದು. ರೈತರು ಕೊಳವೆಬಾವಿ ಕೊರೆಯುವ 15 ದಿನಗಳ ಪೂರ್ವದಲ್ಲಿ ಸಂಬಂಧಪಟ್ಟ ಗ್ರಾಮಪಂಚಾಯತಿ ಕಾರ್ಯಾಲಯಕ್ಕೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು.
ಕೊಳವೆಬಾವಿ ವಿಫಲಗೊಂಡಲ್ಲಿ ಅದನ್ನು ವೈಜ್ಞಾನಿಕವಾಗಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯತನದಿಂದ ಪ್ರಾಣಹಾನಿಯಾಗುವ ಅವಘಡಗಳು ಉಂಟಾದಲ್ಲಿ ಜಮೀನಿನ ಮಾಲೀಕರನ್ನು ನೇರ ಹೊಣೆಗಾರರನ್ನಾಗಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಅಕ್ರಮ ರಿಗ್ ಯಂತ್ರದ ವಿರುದ್ಧ ಕ್ರಮ: ಗ್ರಾಮೀಣ ಪ್ರದೇಶಗಳಲ್ಲಿ ಹಲವು ಪ್ರಕರಣಗಳಲ್ಲಿ ಹೊರ ರಾಜ್ಯಗಳಿಂದ ಬಂದು ರಿಗ್ ಯಂತ್ರವನ್ನು ನೋಂದಾಯಿಸದೆ ಮತ್ತು ಕೊಳವೆಬಾವಿ ಕೊರೆಯಲು ಪರವಾನಿಗೆ ಪಡೆಯದ ಸ್ಥಳೀಯರ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಹೋಗುವ ರಿಗ್ ಯಂತ್ರಗಳ ಮಾಲೀಕರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಡಿಸಿ ತಿಳಿಸಿರು.