ಜಿಲ್ಲೆ

ಶಿಷ್ಟಾಚಾರ ಉಲ್ಲಂಘಿಸಿದರೆ ಅಧಿಕಾರಿಗಳೇ ಹೊಣೆ: ಡಿಸಿ ಅರ್ಚನಾ ಸೂಚನೆ

ರಾಮನಗರ: ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ಆಯೋಜಿಸುವ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಭೆ-ಸಮಾರಂಭಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಶಿಷ್ಟಾಚಾರ ಉಲ್ಲಂಘನೆಯಾಗುತ್ತಿರುವುದಾಗಿ ದೂರುಗಳು ಬರುತ್ತಿದ್ದು, ಇನ್ನು ಮುಂದೆ ಶಿಷ್ಟಾಚಾರ ಉಲ್ಲಂಘನೆಯಾದಲ್ಲಿ ಆಯಾ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಶಿಷ್ಟಾಚಾರ ಪಾಲನೆಯಾಗುವ ಜತೆಗೆ, ಶಿಷ್ಟಾಚಾರದಂತೆಯೇ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿ ವಿತರಿಸಬೇಕು. ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ತಲುಪಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಲೋಪವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಹೊಣೆಯಾಗಿರುತ್ತದೆ ಎಂದರು.

ಪತ್ರಗಳಿಗೆ ಉತ್ತರಿಸಿ: ಜಿಲ್ಲೆಯ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರಾಗಲಿ, ಜನಪ್ರತಿನಿಧಿಗಳಾಗಲಿ ನೀಡುವ ಪತ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಉತ್ತರಿಸಬೇಕು. ಕೇಳಿರುವ ಮಾಹಿತಿಗಳನ್ನು ಒದಗಿಸುವುದು ಜಿಲ್ಲಾಮಟ್ಟದ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.

ಡಿಸಿ ಕಚೇರಿ ಅನುಮತಿ ಅಗತ್ಯ

ಜಿಲ್ಲೆಯಲ್ಲಿ ಸರ್ಕಾರಿ ಸಮಾರಂಭಗಳನ್ನು ಆಯೋಜಿಸುವಾಗ ಸರ್ಕಾರದ ಮುಖ್ಯ ಕಾರ್ಯದರ್ಶಿ 2019ರ ಏಪ್ರಿಲ್​ನಲ್ಲಿ ಹೊರಡಿಸಿರುವ ಸುತ್ತೋಲೆಯಲ್ಲಿರುವ ಅಂಶಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಹಾಗೆಯೇ, ಮುದ್ರಿಸಲಾಗುವ ಆಮಂತ್ರಣ ಪತ್ರಿಕೆಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಬೇಕು. ಅನುಮೋದನೆ ಬಳಿಕ ಹೆಚ್ಚುವರಿ ಹೆಸರುಗಳನ್ನು ಸೇರಿಸಬಾರದು ಹಾಗೂ ಅನುಮೋದಿಸಿರುವ ಹೆಸರುಗಳನ್ನು ಕೈಬಿಡಬಾರದು ಎಂದು ಅರ್ಚನಾ ಅಧಿಕಾರಿಗಳಿಗೆ ಸಲಹೆ ನೀಡಿದರು.