ಜಿಲ್ಲೆ

ಕಸ್ತೂರಿ ರಂಗನ್ ವರದಿ-ಅಧಿಕಾರಿಗಳಿಗೆ ವಾಸ್ತವಾಂಶ ಅರಿವಿಲ್ಲ: ರಾಜೇಗೌಡ

ಚಿಕ್ಕಮಗಳೂರು: ಅಧಿಕಾರಿಗಳಿಗೆ ಕಸ್ತೂರಿ ರಂಗನ್ ವರದಿಯ ವಾಸ್ತವಾಂಶದ ಅರಿವಿನ ಕೊರತೆ ಇದ್ದು, ಗ್ರಾಮಮಟ್ಟದಿಂದ ಜನಾಭಿಪ್ರಾಯ ಸಂಗ್ರಹಿಸಬೇಕಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ನಡೆದ ಕಸ್ತೂರಿ ರಂಗನ್ ವರದಿ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ವರದಿ ಕುರಿತು ಅಧಿಕಾರಿಗಳು ಸುಳ್ಳು ಮಾಹಿತಿ ನೀಡುವುದನ್ನು ಮೊದಲು ನಿಲ್ಲಿಸಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಮಲೆನಾಡು ಭಾಗದ ಜನರ ಕೃಷಿಗೆ ಆಗಲಿ, ಜನವಸತಿಗೇ ಆಗಲಿ ವರದಿಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಜನರನ್ನು ದಾರಿ ತಪ್ಪಿಸಿ ಜನರ ಕೊರಳಿಗೆ ಉರುಳು ಹಾಕುವ ಕೆಲಸ ಮಾಡಿದ್ದಾರೆ ಎಂದರು.

ಕುದುರೆಮುಖದಲ್ಲಿ ಚಿತ್ರಹಿಂಸೆ

ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಣೆಯಾದಾಗ ಅಲ್ಲಿ ಜನವಸತಿಗೆ ಯಾವುದೇ ತೊಂದರೆಯಾಗುವುದಿಲ್ಲ. ರಸ್ತೆಗೆ ಅಡ್ಡಿಪಡಿಸುತ್ತಿದ್ದಾರೆ. ಅಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಬಹುದು ಎಂದಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು ಕೃಷಿಗೂ ಬಿಡುತ್ತಿಲ್ಲ. ರಸ್ತೆ ಅಭಿವೃದ್ಧಿಪಡಿಸಲು ಸಹ ಬಿಡುತ್ತಿಲ್ಲ. ಆದರೆ ಈಗ ಅಲ್ಲಿನ ಜನರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸುಳ್ಳು ಹೇಳಿಕೆಗಳನ್ನು ನಂಬುವುದು ಬೇಡ. ಹೋರಾಟವನ್ನು ತೀವ್ರಗೊಳಿಸಿ ಸಂಬಂಧಿಸಿದವರ ಗಮನ ಸೆಳೆಯಬೇಕು ಎಂದರು.

ವರದಿ ಜಾರಿಯಿಂದ ಮಲೆನಾಡು ಭಾಗದ ಜನರಿಗೆ ಆಗುವ ತೊಂದರೆಗಳ ಬಗ್ಗೆ ಈಗಾಗಲೇ ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿರುವುದಾಗಿ ತಿಳಿಸಿದರು.