ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ಅಭಯ ಹಸ್ತ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಹಸೀನ ಬೇಗಂ, ಉಪಾಧ್ಯಕ್ಷೆ ದ್ಯಾವಮ್ಮ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಉಪಾಧ್ಯಕ್ಷ ಬಿ.ಬಸವರಾಜಪ್ಪ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ಭಾವಿ, ಪ್ರಮುಖರಾದ ಬಸವರಾಜ ನೀರಗಂಟಿ, ಚಂದ್ರಶೇಖರ ಗೌಡ ಪೊ.ಪಾ. ಇತರರಿದ್ದರು. 
ಜಿಲ್ಲೆ

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ವಾರದ ಗಡುವು: ಸಚಿವ ತಂಗಡಗಿ

ಸಿದ್ದಾಪುರ: ಕುಡಿಯುವ ನೀರಿನ ಸಮಸ್ಯೆಯನ್ನು ವಾರದಲ್ಲಿ ಪರಿಹರಿಸಿ, ನನಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಆರ್‌ಡಬ್ಲುೃಎಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.

ಗ್ರಾಪಂ ಆವರಣದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂನಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಯ ಹಸ್ತ ಕಾರ್ಯಕ್ರಮ ಉದ್ಘಾಟಿಸಿ, ಜನರ ಸಮಸ್ಯೆ ಆಲಿಸಿ ಮಾತನಾಡಿದರು.

ಪುರಾತನ ಬಾವಿ ಮತ್ತು ಕಾಲುವೆ ಪಕ್ಕದಲ್ಲಿ 32 ಕುಟುಂಬಗಳು ಅನೇಕ ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿವೆ. ಇವುಗಳನ್ನು ಹೊರತುಪಡಿಸಿ 342 ನಿವೇಶನ ರಹಿತ ಕುಟುಂಬಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆ ಇಲ್ಲದವರಿಗೆ ಮನೆ ನೀಡುವ ಸಂಬಂಧ ಜಾಗ ನಿಗದಿ ಮಾಡಲು ತಾಪಂ ಇಒಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಜಾಗ ಸಹ ನಿಗದಿ ಮಾಡಲಾಗಿದ್ದು, ಪೂರ್ಣ ಸರ್ವೇ ನಡೆಸಿ, ಕ್ರಮವಹಿಸಲು ಸಚಿವರು ತಹಸೀಲ್ದಾರ್‌ಗೆ ಸೂಚಿಸಿದರು.

ಚರಂಡಿ ಸ್ವಚ್ಛತೆಗೆ ಕ್ರಮಕೈಗೊಳ್ಳಲು ಗೊಳಿಸಲು ಪಿಡಿಒ ಹಿಂದೇಟು ಹಾಕುತ್ತಿದ್ದಾರೆಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಪಿಡಿಒ ಸಾಯಿನಾಥ ಪ್ರತಿಕ್ರಿಯಿಸಿ ಒತ್ತುವರಿ ಮಾಡಿ ಚರಂಡಿ ನಿರ್ಮಾಣ ಮಾಡಿದ್ದಾರೆ. ಇಂಗುಗುಂಡಿ ನಿರ್ಮಾಣವೇ ಇದಕ್ಕೆ ಪರ್ಯಾಯ ಎಂದರು.

ಈಳಿಗನೂರು, ಉಳೇನೂರು, ಬೆನ್ನೂರು, ನಂದಿಹಳ್ಳಿ, ಕಕ್ಕರಗೋಳ ಗ್ರಾಮದ ವಿದ್ಯಾರ್ಥಿಗಳು ಗಂಗಾವತಿಯಲ್ಲಿರುವ ಶಾಲೆ, ಕಾಲೇಜಿಗೆ ತೆರಳಲು ಸಿದ್ದಾಪುರ ಬಸ್ ನಿಲ್ದಾಣದಿಂದಲೇ ಬಸ್ ಏರುತ್ತಾರೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ಸಮಸ್ಯೆಯಾಗಿದೆ ಎಂದು ಸ್ಥಳೀಯರು ಸಚಿವರ ಬಳಿ ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತಂಗಡಗಿ, ನಂದಿಹಳ್ಳಿ ಹಾಗೂ ಯರಡೋಣ ಭಾಗಕ್ಕೆ ಎರಡು ಪ್ರತ್ಯೇಕ ಬಸ್ ಬಿಡಬೇಕು. ವಿದ್ಯಾರ್ಥಿಗಳು ನೇರವಾಗಿ ಗಂಗಾವತಿಗೆ ತೆರಳಲು ಬೆಳಗ್ಗೆ 7.30ಕ್ಕೆ ಮತ್ತು ಸಂಜೆ 4 ಗಂಟೆಗೆ ವಾಪಾಸಾಗಲು ಸಮರ್ಪಕ ಸಾರಿಗೆ ವ್ಯವಸ್ಥೆ ಮಾಡುವಂತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳು ಪ್ರತಿಕ್ರಿಯಿಸಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಗುರುವಾರದಿಂದಲೇ ಬಸ್ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.