ಬಳ್ಳಾರಿ : ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅಧ್ಯಕ್ಷತೆಯಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಒಂದನೇಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಅಧಿಕಾರಿಗಳ ಕಾರ್ಯವೈಖರಿಗೆ ಒಂದಡೆ ಅಸಮಾಧಾನ ವ್ಯಕ್ತವಾದರೆ, ಕೆಲ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ಸಭೆ ಸೂಕ್ತ ಅಂಕಿ ಅಂಶಗಳೊಂದಿಗೆ ಬಾರದ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಳ್ಳಲಾಯಿತು. ಗೈರಾದ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತವಾಯಿತು.
ಕೃಷಿ ಇಲಾಖೆಯಲ್ಲಿ ಪ್ರಸ್ತಕ ಸಾಲಿನಲ್ಲಿ ರೈತರ ವಿಮೆ ನೋಂದಣಿ ಅಂಕಿಅಂಶ ಗಮನಿಸಿದ ಸಚಿವ ಜಮೀರ್ ಮತ್ತು ಶಾಸಕ ಬಿ.ನಾಗೇಂದ್ರ ಅಧಿಕಾರಿಗಳ ವಿರುದ್ಧ ಬೇಸರಪಡಿಸಿದರು. ಅಲ್ಲದೆ, ವಿಮಾ ಕಂಪನಿ ಹಾಗೂ ನಕಲಿ ರೈತರು ಹೊಂದಾಣಿಕೆಯಿಂದ ಅಕ್ರಮವಾಗಿ ವಿಮೆ ಹಣ ಅರ್ಹ ರೈತರಿಗೆ ತಲುಪದೇ ಬೇರೆಯುವರ ತಲುಪುತ್ತಿರುವ ಬಗ್ಗೆ ಕೊಪ್ಪಳದಲ್ಲಿ ಪ್ರಕರಣಗಳು ಹೆಚ್ಚುತ್ತಿದೆ. ಇಲ್ಲಿನಡೆಯದಂತೆ ಮುಂಜಾಗೃತೆ ಕ್ರಮವಹಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್‌ಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನಿರ್ದೇಶಿಸಿದರು.
ಜೆಸ್ಕಾಂ ಇಲಾಖೆಯು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಶುಲ್ಕಕ್ಕೆ ಹೆಚ್ಚಿನ ಬಡ್ಡಿ ಹಾಕುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದರ ಬಗ್ಗೆ ಸಿಎಂ ಜತೆ ಚರ್ಚಿಸಿ ಶುಲ್ಕಕ್ಕೆ ಬಡ್ಡಿ ಪಾವತಿಸದಂತೆ ಕ್ರಮವಹಿಸಲಾಗುವುದು. ಅಲ್ಲಿಯವರೆಗೆ ಯಾರು ಕೂಡ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಹೊಸ ಮೀಟರ್ ಅಳವಡಿಕೆ ಹೆಚ್ಚಿನ ಹಣ ಪಡೆಯುವರು ವಿರುದ್ದ ಶಿಸ್ತುಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾದ್ಯಂತ ನಿತ್ಯ ಹನ್ನೊಂದು ಸಾವಿರ ಲೀ. ಸಂಗ್ರಹವಾಗುತ್ತಿದ್ದು, ಹಾಲು ಉತ್ಪಾದಕ ಸಂಘಗಳು ಹೆಚ್ಚಿಸಿ ನಿತ್ಯ 25 ಸಾವಿರ ಲೀ. ಹಾಲು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ರಾಬಕೊವಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಭುಶಂಕರ ಸಭೆಗೆ ತಿಳಿಸಿದರು. ಕೆಲ ರಾಜಕೀಯ ಮುಖಂಡರ ಬೆಂಬಲದಿಂದ ಜಿಲ್ಲೆಯಲ್ಲಿನ ಹಾಲು ಉತ್ಪಾದಕ ಸಂಘಗಳನ್ನು ಮುಚ್ಚಲಾಗಿದೆ ಎಂದು ಶಾಸಕ ಬಿ.ನಾಗೇಂದ್ರ ಏರುಧ್ವನಿಯಲ್ಲಿ ಅಧಿಕಾರಿ ವಿರುದ್ಧ ಅಕ್ರೋಶಗೊಂಡರು.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಯಾವುದೇ ಒಂದು ಯೋಜನೆಗೆ ಫಲಾನುಭವಿಗಳ ಆಯ್ಕೆ ವೇಳೆ ಆಯಾ ತಾಲೂಕಿನ ಶಾಸಕರ ಗಮನಕ್ಕೆ ತಂದು ಆಯ್ಕೆ ಮಾಡಬೇಕು ಎಂದು ಸಚಿವ ಜಮೀರ್ ಆದೇಶಿಸಿದರು.
ಜಿಲ್ಲೆಯಲ್ಲಿ ಚಿಲ್ಲಿ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಿದ್ದು ಈಗಾಗಲೇ ಆಲದಹಳ್ಳಿಯಲ್ಲಿ ಸ್ಥಳ ಗುರುತಿಸಲಾಗಿದ್ದು ಕಾಮಗಾರಿ ಆರಂಭಿಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ವಿ.ಜಯಕುಮಾರ್ ಸಭೆಗೆ ಉತ್ತರಿಸಿದರು. ಚಿಲ್ಲಿ ಮಾರುಕಟ್ಟೆ ಪೂರ್ಣಗೊಳ್ಳುವುದಕ್ಕೆ ಇನ್ನೂ ನೂರು ವರ್ಷ ಬೇಕ ? ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಪ್ರಶ್ನಿಸಿದ್ದು ನಗೆಪಾಟೀಲಿಗೆ ಈಡಾಯಿತು.
ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಹಿನ್ನೆಲೆ ಕಳೆದ ಒಂದು ವರ್ಷದಿಂದ ಗರ್ಭಿಣಿಯರು ದಾಖಲಾತಿ ಸಂಖ್ಯೆ ತಗ್ಗುತ್ತಿದೆ ಎಂದು ಸಚಿವ ಜಮೀರ್ ಡಿಎಚ್‌ಒ ಹಾಗೂ ಜಿಲ್ಲಾ ಸರ್ಜನ್ ವಿರುದ್ಧ ಅಕ್ರೋಶಗೊಂಡರು. ಇದೇ ವೇಳೆ ಬಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ ಸಭೆಗೆ ಗೈರಾದ ಹಿನ್ನೆಲೆ ಅಮಾನತುಗೊಳಿಸುವಂತೆ ಡಿಸಿ ನಾಗೇಂದ್ರ ಪ್ರಸಾದ್‌ಗೆ ಸೂಚಿಸಿದರು.
ಬಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿನ ಎಲ್ಲ ವೈದ್ಯರು ಶಾಸಕರ ಕರೆ ಸ್ವೀಕರಿಸುವುದಿಲ್ಲ ಅಂತಹವರನ್ನು ಅಮಾನತುಗೊಳಿಸಿ ಎಂದು ಮೇಲಧಿಕಾರಿಗಳಿಗೆ ಆದೇಶಿಸಿದರು. ಇದೇ ವೇಳೆಶಾಸಕ ಗಣೇಶ್ ಅವರ ಮೊಬೈಲ್ ನಂಬರ್ ಹೇಳುವಂತೆ ತಾಲೂಕು ಆರೋಗ್ಯಧಿಕಾರಿಗೆ ಸೂಚಿಸಿ ಹೇಳಿಸಿದರು. ನಾನಾ ಇಲಾಖೆಯ ಪ್ರಗತಿ ಪರಿಶೀಲಿಸಲಾಯಿತು.
ಅಮಾನತುಗೆ ಆದೇಶ : ಜಿಲ್ಲೆಯ ಕೆಕೆಆರ್‌ಟಿಸಿ ವಿಭಾಗದ ನಿಯಂತ್ರಣಾಧಿಕಾರಿ ವಿರುದ್ಧ ಸಾರ್ವಜನಿಕರಿಂದ ಹಲವು ದೂರು ವ್ಯಕ್ತವಾಗಿದ್ದವು. ಅಲ್ಲದೆ, ಸಭೆಗೆ ಗೈರಾಗಿದ್ದು ಕಂಡು ಕೂಡಲೇ ವಿಭಾಗದ ನಿಯಂತ್ರಣಾಧಿಕಾರಿ ಇನಾಯತ್ ಬಾಗಬಾನ್ ಅವರನ್ನು ಅಮಾನತುಗೊಳಿಸಿ. ನಾನು ಹೇಳುವವರೆಗೆ ಮರಳಿ ಹುದ್ದೆಗೆ ಸೇರಿಸಿಕೊಳ್ಳಬಾರದು ಎಂದು ಸಚಿವ ಜಮೀರ್ ಡಿಸಿಗೆ ಆದೇಶಿಸಿದರು.
ಬಾಕ್ಸ್ : ಇಲ್ಲಿನ ಜಿಪಂ ಎರಡು ಗಂಟೆಗೆ ನಿಗದಿಯಾಗಿದ್ದ ಕೆಡಿಪಿ ಸಭೆ ಐದು ಗಂಟೆಗೆ ಆರಂಭವಾಯಿತು. ಶಾಸಕಿ ಅನ್ನಪೂರ್ಣ, ಸಂಸದ ಈ.ತುಕಾರಾಮ್ ಸಭೆಗಾಗಿ ಬಂದು ಕಾದರು ಕೂಡ ಸಭೆ ಆರಂಭಗೊಳ್ಳದ್ದಿದ್ದರಿಂದ ಸಚಿವ ಜಮೀರ್ ಬಂದ ಕೂಡಲೇ ಸಭೆಯಿಂದ ಹೊರನಡೆದಿದ್ದು ಚರ್ಚೆಗೆ ಗ್ರಾಸವಾಯಿತು. ಮಹಾನಗರ ಪಾಲಿಕೆಗೆ ಸಂಬಂಧಿಸಿದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ಪ್ರಮುಖ ವಕೀಲರನ್ನು ನೇಮಿಸಲು ಸಿಎಂ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಕಂಪ್ಲಿ ಶಾಸಕ ಜೆ. ಎನ್.ಗಣೇಶ್ ಬಹುತೇಕ ಪ್ರಶ್ನೆ ಹಾಗೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಒಟ್ಟಾರೆ, ತಾಲೂಕಿನಲ್ಲಿನ ಪ್ರತಿಯೊಂದು ಸಮಸ್ಯೆಗಳಿಗೆ ಆಯಾ ಅಧಿಕಾರಿಗಳಿಗೆ ಚಳಿ ಬಿಡಿಸಿದರು.