ಜಿಲ್ಲೆ

ಬಿಸ್ಕತ್, ಟೀ ಆತಿಥ್ಯಕ್ಕೆ ಸಭೆ ಕರೆದಿಲ್ಲ, ಮಾಹಿತಿಯೊಂದಿಗೆ ಸಭೆಗೆ ಬನ್ನಿ

Chikkamagaluru

ಶೃಂಗೇರಿ: ಅಧಿಕಾರಿಗಳು ಮಾಹಿತಿಯೊಂದಿಗೆ ಸಭೆಗೆ ಸಿದ್ಧತೆ ಮಾಡಿಕೊಂಡು ಬರಬೇಕು. ಬಿಸ್ಕತ್ ತಿಂದು ಟೀ ಕುಡಿದು ಹೋಗಲು ಸಭೆ ಕರೆದಿಲ್ಲ ಎಂದು ವಿಶೇಷ ಘಟಕ ಹಾಗೂ ಗಿರಿಜನ ಯೋಜನೆಯ ಸದಸ್ಯ ಬಿ.ಶಿವಶಂಕರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಪಂ ಸಭಾಂಗಣದಲ್ಲಿ ಸೋಮವಾರ ವಿಶೇಷ ಘಟಕ ಹಾಗೂ ಗಿರಿಜನ ಯೋಜನೆಯ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಅವರು, ಸರಕಾರ ಗಿರಿಜನ ಉಪಯೋಜನೆಯಡಿ ರೂಪಿಸಿದ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚು. ಯಾವುದೇ ಪ್ರಗತಿ ಪರಿಶೀಲನಾ ಸಭೆ ಕರೆದಾಗ ಅಧಿಕಾರಿಗಳು ಮಾಹಿತಿಯೊಂದಿಗೆ ಬರೆಬೇಕು. ಸಭೆಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಹೇಳಿದರು.

ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ವರ್ಗದ ಜನರಿಗೆ ಸರಕಾರ ಹಲವಾರು ಯೋಜನೆ ರೂಪಿಸಿದೆ. ಯೋಜನೆ ಮಾಹಿತಿ ಕೊರತೆ ಇರುವ ಕಾರಣ ಅವರಿಗೆ ಲಭ್ಯ ಅನುದಾನಗಳ ಅರಿವು ಮೂಡಿಸಬೇಕು.

ಇಪ್ಪತ್ತಾರು ಇಲಾಖೆಗಳಲ್ಲಿ ಕೇವಲ ಆರು ಇಲಾಖೆ ಅಧಿಕಾರಿಗಳು ಮಾತ್ರ ಇಂದಿನ ಸಭೆಗೆ ಬಂದಿದ್ದೀರಿ. ಇತರ ಅಧಿಕಾರಿಗಳು ಗೈರಾಗಿದ್ದಾರೆ. ಸಭೆಗೆ ಭಾಗವಹಿಸಲು ಸಾಧ್ಯವಾಗದಿದ್ದರೆ ತಾಪಂ ಇಒ ಅವರಿಗೆ ಮಾಹಿತಿ ನೀಡಬೇಕು. ಸಭೆಗಳು ಕೇವಲ ಬಿಸ್ಕತ್ ಮತ್ತು ಟೀಗೆ ಸೀಮಿತವಾಗಬಾರದು ಎಂದರು.