ಬೆಂಗಳೂರು: ನಗರದ ಮಲ್ಲೇಶ್ವರದಲ್ಲಿರುವ ಸಹಕಾರ ಇಲಾಖೆಯ ‘ಸಹಕಾರ ಸೌಧ’ದ ವಾಣಿಜ್ಯ ಮಳಿಗೆಗಳ ಆಸ್ತಿತೆರಿಗೆ ಪಾವತಿಯಾಗದ ಕಾರಣ ಬಿಬಿಎಂಪಿ ಬೀಗ ಹಾಕಿದ ಪರಿಣಾಮ ಅಲ್ಲಿನ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ಸಹಕಾರ ಸೌಧದಲ್ಲಿರುವ ಮಳಿಗೆಗಳ ಕಟ್ಟಡಕ್ಕೆ ಸಹಕಾರ ಇಲಾಖೆ ಒಟ್ಟು 40.86 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಎಂಟು ವರ್ಷಗಳಿಂದ ಆಸ್ತಿತೆರಿಗೆ ಪಾವತಿಸದ ಕಾರಣ ಬಡ್ಡಿ, ದಂಡದ ಹಣವೂ ಸೇರಿ ಈ ಬೃಹತ್ ಮೊತ್ತಕ್ಕೆ ಹಿಗ್ಗಿದೆ. ಈ ಮೊತ್ತವನ್ನು ಪಾವತಿಸುವಂತೆ ಇತ್ತೀಚಿಗೆ ಪಾಲಿಕೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಇದನ್ನು ನೋಡಿ ಮಳಿಗೆಗಳ ವ್ಯಾಪರಿಗಳು ಹೌಹಾರಿದ್ದರು. ಏಕೆಂದರೆ ಈ ವ್ಯಾಪಾರಿಗಳೆಲ್ಲರೂ ತಮ್ಮ ಪಾಲಿನ ತೆರಿಗೆಯನ್ನು ಇಲಾಖೆಯ ಜಂಟಿ ಪ್ರಬಂಧಕರಿಗೆ (ಮಲ್ಲೇಶ್ವರ ಶಾಖೆ) ಪಾವತಿಸಿದ್ದರು. ಆದರೆ, ಆ ಹಣವನ್ನು ಈ ಅಧಿಕಾರಿಯು ಪಾಲಿಕೆಗೆ ಸಂದಾಯ ಮಾಡಿರಲಿಲ್ಲ.
ಈ ವಿಚಾರವನ್ನು ಮಳೆಗೆದಾರರು ಇಲಾಖೆಯ ಮಹಾ ಪ್ರಬಂಧಕ ಕ್ಯಾ. ರಾಜೇಂದ್ರ ಅವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿ ತಕ್ಷಣವೇ ಅವರು ಬಿಬಿಎಂಪಿ ಆಯುಕ್ತರನ್ನು ಸಂಪರ್ಕಿಸಿ ಇಲಾಖೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಹಣ ತುಂಬಲಿದ್ದು, ಮಳಿಗೆಗಳಿಗೆ ಹಾಕಿ ರುವ ಬೀಗಗಳನ್ನು ತೆರೆಸಬೇಕೆಂದೂ ವಿನಂತಿಸಿಕೊಂಡಿದ್ದರು. ಆದರೆ, ನೋಟಿಸ್ ಜಾರಿ ಮಾಡಿರುವುದರಿಂದ ಮಳಿಗೆದಾರರು ಸ್ವಲ್ಪ ಹಣವನ್ನು ಪಾವತಿಸಬೇಕೆಂದು ತಿಳಿಸಲಾಗಿತ್ತು. ಇದರನ್ವಯ ಮಳಿಗೆದಾರರೇ ಹಣ ಹೊಂದಿಸಿಕೊಡಲು ಮುಂದಾಗಿ ಶನಿವಾರ ಚಲನ್ ಕಟ್ಟುವ ವೇಳೆಗೆ ಬ್ಯಾಂಕಿನ ಕೆಲಸದ ಅವಧಿ ಮುಗಿದಿತ್ತು.ಇದರಿಂದಾಗಿ ಸೋಮವಾರ ಹಣ ಪಾವತಿಸುವ ಅನಿವಾರ್ಯತೆ ಸೃಷ್ಟಿಯಾಯಿತು.
ಇತ್ತ ಸಹಕಾರ ಇಲಾಖೆಯ ತಪ್ಪಿನಿಂದ ಮಳಿಗೆದಾರರಿಗೆ 4-5 ದಿನಗಳ ಕಾಲ ವ್ಯಾಪಾರ ನಷ್ಟವಾಗಿದೆ. ಈ ದಿವ್ಯ ನಿರ್ಲಕ್ಷದ ಹೊಣೆಯನ್ನು ಮಹಾ ಪ್ರಬಂಧಕರು ಅಥವಾ ಜಂಟಿ ಪ್ರಬಂಧಕರು ಹೊರುವರೋ? ಎಂದು ಪ್ರಶ್ನಿಸಿದ್ದು, ಪ್ರಕರಣವನ್ನು ಸಹಕಾರ ಸಚಿವರಿಗೆ ವಿವರಿಸಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಮಳಿಗೆದಾರರು ಆಗ್ರಹಿಸಿದ್ದಾರೆ.