ಧಾರವಾಡ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದ ಪ್ರಕರಣದ ಅಡಿ ಲೋಕಾಯುಕ್ತ ದಾಳಿಗೊಳಗಾಗಿದ್ದ ಅಧಿಕಾರಿ ದೋಷಿ ಎಂದು ತೀರ್ಪು ನೀಡಿ 1 ವರ್ಷ ಕಠಿಣ ಜೈಲು ಶಿಕ್ಷೆ, 25,000 ರೂ. ದಂಡ ವಿಧಿಸಿ ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಾಗಿದ್ದ ನೂರಅಹ್ಮದಖಾನ್ ಸತ್ತರಖಾನ್ ದೋಷಿ. ಇವರ ಮನೆಯ ಮೇಲೆ 2010ರ ನ. 15ರಂದು ಲೋಕಾಯುಕ್ತ ಅಽಕಾರಿಗಳು ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದನ್ನು ಪತ್ತೆ ಹಚ್ಚಿದ್ದರು. ಈ ಸಂಬ0ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಲೋಕಾಯುಕ್ತ ಡಿಎಸ್‌ಪಿ ಯು.ಎಸ್. ಶಿವಳ್ಳಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧಿಶ ಎನ್. ಸುಬ್ರಮಣ್ಯ ಅವರು ನೂರಅಹ್ಮದಖಾನ್‌ಗೆ 1 ವರ್ಷ ಕಠಿಣ ಜೈಲುಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಎಸ್. ಶಿವಳ್ಳಿ ವಾದ ಮಂಡಿಸಿದ್ದರು.