ಜಿಲ್ಲೆ

ಮತ್ತೆ ಶೆಟ್ಟರ್ ಗೃಹ ಕಚೇರಿ ಅಲಂಕರಿಸಿದ ಬಿಜೆಪಿ ಮುಖಂಡರ ಫೋಟೊ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗೃಹ ಕಚೇರಿಯ ಗೋಡೆಯ ಮೇಲೆ ಮತ್ತೆ ರಾರಾಜಿಸುತ್ತಿದೆ.

ಜಗದೀಶ ಶೆಟ್ಟರ್ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿದ ನಂತರ ಪ್ರಧಾನಿ ಸೇರಿದಂತೆ ಬಿಜೆಪಿ ಮುಖಂಡರೊಂದಿಗೆ ಇದ್ದ ಫೋಟೊಗಳನ್ನು ಗೃಹ ಕಚೇರಿಯ ಗೋಡೆಯಿಂದ ತೆಗೆಯಲಾಗಿತ್ತು. ಗುರುವಾರದಂದು ಶೆಟ್ಟರ್ ಅವರು ಕಾಂಗ್ರೆಸ್​ಗೆ ರಾಜೀನಾಮೆ ನೀಡಿ, ಮರಳಿ ಬಿಜೆಪಿ ಸೇರುತ್ತಿದ್ದಂತೆಯೇ ಅವರ ಅಭಿಮಾನಿಗಳು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇದ್ದ ಶೆಟ್ಟರ್ ಅವರ ಫೋಟೊ ಹಾಗೂ ಇತರ ಬಿಜೆಪಿ ನಾಯಕರೊಂದಿಗೆ ಇದ್ದ ಫೋಟೊಗಳನ್ನು ಗೋಡೆಗೆ ನೇತು ಹಾಕಿದ್ದಾರೆ.

ಗೃಹ ಕಚೇರಿಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರೊಂದಿಗೆ ಇದ್ದ ಫೋಟೊ, ಹೊರಗಡೆ ಇದ್ದ ಕಾಂಗ್ರೆಸ್​ನ ಇತರ ನಾಯಕರೊಂದಿಗಿನ ಕಟೌಟ್​ಗಳನ್ನು ಸಹ ಬಿಜೆಪಿ ಕಾರ್ಯಕರ್ತರು ತೆಗೆದು ಹಾಕಿದರು.

ಕಾಂಗ್ರೆಸ್ ಬಾವುಟ ತೆಗೆದು, ಬಿಜೆಪಿ ಬಾವುಟವನ್ನು ಗೋಡೆಗಳಿಗೆ ಕಟ್ಟಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಶೆಟ್ಟರ್ ನಿವಾಸದ ಎದುರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ವಿರುಪಾಕ್ಷ ರಾಯನಗೌಡ್ರ, ಮಂಜುನಾಥ ದಲಬಂಜನ, ಭಾರತಿ ಟಪಾಲ, ಶಂಕರ ಸುಂಕದ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.