ಜಿಲ್ಲೆ

ಪದಾಧಿಕಾರಿಗಳು ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಿ: ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸಲಹೆ

ಮೈಸೂರು: ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ನೇತೃತ್ವದಲ್ಲಿ ಬುಧವಾರ ಪಕ್ಷದ ಕಚೇರಿಯಲ್ಲಿ ತಾಲೂಕುವಾರು ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು.
ಈ ಸಂದರ್ಭ ಮಾತನಾಡಿದ ಎಲ್.ಆರ್. ಮಹದೇವಸ್ವಾಮಿ ಅವರು, ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನಿರ್ದೇಶನದಂತೆ ತಾಲೂಕು ಮಟ್ಟದ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕಿದೆ ಎಂದರು.
ನಮ್ಮ ಹಿರಿಯ ನಾಯಕರು ಈಗಾಗಲೇ ಹಲವು ಸಲಹೆಗಳನ್ನು ನಮ್ಮೆಲ್ಲರಿಗೂ ಕೊಟ್ಟಿದ್ದು, ಇದನ್ನು ಪ್ರಾಮಾಣಿಕವಾಗಿ ಸಂಘಟನಾತ್ಮಕವಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡಬೇಕಿದೆ. ಈ ಮೂಲಕ ಪ್ರತಿ ಮಂಡಲಗಳಲ್ಲಿಯೂ ಸಭೆ ಕರೆಯುವ ಮೂಲಕ ಪದಾಧಿಕಾರಿಗಳ ಸಮ್ಮುಖದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಯಾವ ಯಾವ ಹಂತದಲ್ಲಿ ಮುನ್ನೆಡೆಯಬೇಕೆಂಬುದನ್ನು ಚರ್ಚಿಸಿ ಎಲ್ಲರ ಸಲಹೆಗಳೊಂದಿಗೆ ಮುನ್ನಡೆಯಲಾಗುವುದು ಎಂದು ಹೇಳಿದರು.
ಮುಖಂಡರಾದ ಮೈ.ವಿ. ರವಿಶಂಕರ್ ಮಾತನಾಡಿ, ಜಿಲ್ಲಾ ಅಧ್ಯಕ್ಷರು ಬಣಗಳನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ಚುನಾವಣೆಯಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಬೇಕಿದೆ. ಸಣ್ಣಪುಟ್ಟ ಗೊಂದಲಗಳಿದ್ದರೆ ಅದಕ್ಕೆ ತೆರೆ ಎಳೆದು ಚುನಾವಣೆಯಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ ಎಂದರು.
ಬಿಜೆಪಿ ಮಾಧ್ಯಮ ಪ್ರಮುಖ್ ವಸಂತ್‌ಕುಮಾರ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿದ್ದು ಇದಕ್ಕೆ ದೇಶ ಹಾಗೂ ಹೊರದೇಶಗಳಲ್ಲಿಯೂ ನಿರೀಕ್ಷೆಗೂ ಮೀರಿದ್ದ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ರಾಷ್ಟ್ರಾಭಿವೃದ್ಧಿಯ ಕೆಲಸವಾಗಿದೆ. ಪ್ರಧಾನಿ ಮೋದಿ ಅವರ ಇಂತಹ ಕೆಲಸವನ್ನು ಜನರಿಗೆ ತಿಳಿಸಿ ಹೇಳಬೇಕಿದೆ. ಫೆಬ್ರವರಿ 3ರಂದು ಆಯೋಧ್ಯೆಗೆ ತೆರಳಲು ರೈಲ್ವೆಯಲ್ಲಿ ಅವಕಾಶವಿದ್ದು, ಅಪೇಕ್ಷಿತರು ಮುಂಗಡ ಕಾಯ್ದಿರಿಸುವಂತೆ ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಮಂಗಳಾ ಸೋಮಶೇಖರ್, ಮಾಜಿ ಸಂಸದ ವಿಜಯಶಂಕರ್, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮುಖಂಡರಾದ ಸುರೇಶ್‌ಬಾಬು ಇತರರು ಇದ್ದರು.