ಜಿಲ್ಲೆ

ಸ್ವರ್ಣಗೌರಿಗೆ ಮುತ್ತೈದೆಯರಿಂದ ಬಾಗಿನ ಸಮರ್ಪಣೆ

ಮಾಗಡಿ: ತಾಲೂಕಿನಾದ್ಯಂತ ಸ್ವರ್ಣ ಗೌರಿ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಪುರಾತನ ಗೌರಮ್ಮನಕೆರೆ ಬಳಿಯ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯ, ಕೆಂಪಸಾಗರ ಕೆರೆಯ ಬಸವೇಶ್ವರ, ವೀರೇಗೌಡನ ದೊಡ್ಡಿ ಗ್ರಾಮದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ, ವಿವಿಧ ಒಡವೆ, ವಸ್ತ್ರಗಳಿಂದ ಅಲಂಕರಿಸಿ, ಬಗೆಬಗೆಯ ಹಣ್ಣು, ಸಿಹಿ ಖ್ಯಾದ್ಯಗಳನ್ನಿಟ್ಟು ಶ್ರದ್ಧಾಭಕ್ತಿಯಿಂದ ದೇವಿಗೆ ಆರತಿ ಬೆಳಗಿ, ಪೂಜಿಸಿ, ಬಾಗಿನ ಅರ್ಪಿಸಲಾಯಿತು.

ಬಳಿಕ ಮಹಿಳೆಯರು ತಾವು ತಂದಿದ್ದ ಬಾಗಿನವನ್ನು ವಿನಿಮಯ ಮಾಡಿಕೊಂಡು ಶುಭ ಕೋರಿದರು. ಇನ್ನು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಯುವಕರು ಗಣಪತಿ ಮೂರ್ತಿ ಪ್ರತಿಷ್ಠಾಪಿಸಲು, ಸಿದ್ಧತೆಯಲ್ಲಿ ತೊಡಗಿದ್ದರು.

ಅರ್ಚಕ ಕಿರಣ್​ ದೀತ್​ ಮಾತನಾಡಿ, ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಗೌರಮ್ಮನ ಕೆರೆಯಲ್ಲಿ ಗೌರಿಹಬ್ಬದಂದು ಗಂಗೆ ಪೂಜೆ, ಬಾಗಿನ ಸಮರ್ಪಣೆ ಬಳಿಕ ಕೆರೆಯಲ್ಲಿ ಕೈ ಹಾಕಿ ತೆಗೆದಾಗ ಅರಿಶಿನ, ಕುಂಕುಮ ಸಿಕ್ಕಿರುವುದರಿಂದ ಈ ಬಾರಿ ಹೆಣ್ಣು ಮಕ್ಕಳಿಗೆ ಸೌಭಾಗ್ಯ ಎಂಬ ನಂಬಿಕೆ ಇದೆ. ಇಮ್ಮಡಿ ಕೆಂಪೇಗೌಡರು ನಿರ್ಮಿಸಿದ ಈ ದೇವಾಲಯದಲ್ಲಿ ಅಂದಿನಿಂದಲ್ಲೂ ಪ್ರತಿ ವರ್ಷ 5 ದಿನಗಳ ಕಾಲ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.

ನಗರಸಭೆ ಸದಸ್ಯ ಎಚ್​.ಜೆ.ಪುರುಷೋತ್ತಮ್​, ಅರ್ಚಕ ಗೋಪಾಲ್​ ದಿತ್​, ಪ್ರವಿಣ್​ ದೀತ್​, ವಿಜಯದೀತ್​, ಐಶ್ವರ್ಯ, ಮಹದೇವಮ್ಮ, ಜಯಲ್ಮ, ರಾಧಿಕಾ, ಕವಿತಾ, ಕೀರ್ತನಾ, ಶ್ರಾವಣಿ, ಹರ್ಷಿಣಿ, ಶಿಕ್ಷಕಿ ಗೀತಾ, ನಿಸರ್ಗ, ಗಮ್ಯ ಇದ್ದರು.

ಕೈಗೆ ಸಿಕ್ಕ ಗರಿಕೆ ತಾಲೂಕಿನ ನಾಯ್ಕನಪಾಳ್ಯ ಗೇಟ್​ ಬಳಿಯ ದಳವಾಯಿ ಕೆರೆಯಲ್ಲಿ ವೀರೇಗೌಡನ ದೊಡ್ಡಿ ಗ್ರಾಮಸ್ಥರು ಕೆರೆಯಲ್ಲಿ ಗಂಗೆಯನ್ನು ಪೂಜಿಸಿ, ಕೆರೆಯಲ್ಲಿ ಕೈ ಇಟ್ಟಾಗ ಗರಿಕೆ ಸಿಕ್ಕರೆ ಉತ್ತಮ ಬೆಳೆಯಾಗುತ್ತದೆ ಎಂಬ ನಂಬಿಕೆ. ಅದರಂತೆ ಮಂಗಳವಾರ ಕೆರೆಯಲ್ಲಿ ಸಿಕ್ಕಿದ ಗರಿಕೆಯನ್ನು ಗ್ರಾಮದ ಚಂದ್ರಮೌಳೇಶ್ವರ ದೇವಾಲಯಕ್ಕೆ ತಂದು ಪೂಜಿಸಿ, ಮಹಿಳೆಯರು ಬಾಗಿನ ಸಮರ್ಪಿಸಿದರು.