ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ನಾಗಮಲೆ ಸೇವಾ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.  
ಜಿಲ್ಲೆ

ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಅನ್ನಸಂತರ್ಪಣೆ

ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಶ್ರೀನಾಗಮಲೆ ಸೇವಾ ಸಮಿತಿ ವತಿಯಿಂದ 10ನೇ ವರ್ಷದ ಅನ್ನ ಸಂತರ್ಪಣೆ ನಡೆಯಿತು.

ಈ ಹಿಂದೆ ಮಾದಪ್ಪನ ನೆಲೆಬೀಡಾದ ಶ್ರೀ ನಾಗಮಲೆ ಸನ್ನಿಧಿಯ ತಪ್ಪಲಿನಲ್ಲಿರುವ ಇಂಡಿಗನತ್ತ ಗ್ರಾಮದಲ್ಲಿ ಅನ್ನದಾನ ನಡೆಸಲಾಗಿತ್ತು. ಆದರೆ ಅರಣ್ಯ ಇಲಾಖೆಯ ನಿರ್ಬಂಧದ ಹಿನ್ನೆಲೆಯಲ್ಲಿ ಈ ವರ್ಷ ಮ.ಬೆಟ್ಟದ ಮುಡಿಕಟ್ಟೆ ಹಿಂಭಾಗದಲ್ಲಿನ ಪರ ಮಾಡುವ ಸ್ಥಳದಲ್ಲಿ ಮೈಸೂರಿನ ನಾಗಮಲೆ ಸೇವಾ ಸಮಿತಿ, ಬೆಂಗಳೂರು ಹಾಗೂ ರಾಮನಗರ ಭಕ್ತರ ಸಹಾಯದಿಂದ ಅನ್ನ ಸಂತರ್ಪಣೆ ಕಾರ್ಯ ನಡೆಯಿತು.

ಅನ್ನದಾನಕ್ಕೆ ಅಗತ್ಯವಾದ ದವಸ ಧಾನ್ಯವನ್ನು ಸಿದ್ಧಪಡಿಸಿಕೊಂಡಿದ್ದ ಸಮಿತಿ ಸದಸ್ಯರು ಬೆಳಗ್ಗೆ 6 ಗಂಟೆಯಲ್ಲಿ ಮಾದಪ್ಪನಿಗೆ ಪ್ರಥಮ ಪೂಜೆ ಹಾಗೂ ಅಭಿಷೇಕ ನೆರವೇರಿಸಿದರು. ಮಧ್ಯಾಹ್ನ 10 ಸಾವಿರ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಮುದ್ದೆ, ಅವರೆಕಾಳಿನ ಕೂಟು, ಪಂಚಾಮೃತ ಹಾಗೂ ಸಿಹಿ ಪದಾರ್ಥವನ್ನು ಭಕ್ತರಿಗೆ ಉಣ ಬಡಿಸಲಾಯಿತು.

ಶ್ರೀ ಮಹದೇಶ್ವರ ಸ್ವಾಮಿ ಎಣ್ಣೆಮಜ್ಜನ ಸೇವಾ ಕರ್ತ ಹಾಗೂ ಸರಗೂರಿನ ಮೂಗಪ್ಪ ರಾಮವ್ವ ತಾಯಿಯ ವಂಶಸ್ಥ ಸಿದ್ದಪ್ಪಸ್ವಾಮಿ ಅವರ ನೇತೃತ್ವದಲ್ಲಿ ಅನ್ನಸಂತರ್ಪಣೆ ನಡೆಯಿತು. ಅನ್ನ ಸಂತರ್ಪಣೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾನ್ಯವಾಗಿ ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲೂ ಅರವಟ್ಟಿಗೆ, ಅನ್ನ ಸಂತರ್ಪಣೆ ನಡೆಯುತ್ತದೆ. ಆದರೆ ಮಾದಪ್ಪನ ಶ್ರೀಕ್ಷೇತ್ರದಲ್ಲಿ ಅನ್ನ ಸಂತರ್ಪಣೆಗೆ ಅದರದ್ದೇ ಆದ ಮಹತ್ವವಿದೆ. ಈ ದೆಸೆಯಲ್ಲಿ 10ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.