ಜಿಲ್ಲೆ

ಗ್ರಾಮದೇವಿಗೆ ಉಡಿ ತುಂಬಿ ಭಕ್ತಿ ಸಮರ್ಪಣೆ

ಉತ್ತರ ಕನ್ನಡ ಡೆಸ್ಕ್

ಮುಂಡರಗಿ: ಪಟ್ಟಣದ ಕೋಟೆ ಭಾಗದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ಕಡೆ ಮಂಗಳವಾರ ಪ್ರಯುಕ್ತ ಗ್ರಾಮದೇವತೆ ದ್ಯಾಮವ್ವ ದೇವಿ ಹಾಗೂ ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಯಿತು. ಸಾವಿರಾರು ಮುತೈದೆಯರು ದ್ಯಾಮವ್ವ ದೇವಿಗೆ ಹಾಗೂ ದುರ್ಗಾದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು.

ಭಕ್ತರು ನೀರು ಮತ್ತು ಬೇವಿನ ಎಲೆಯನ್ನು ದೇವಸ್ಥಾನದ ಮುಂಭಾಗದಲ್ಲಿ ಸುರುವಿ ಸಮೃದ್ಧ ಮಳೆ ಬೆಳೆಯಾಗಿ ಒಳ್ಳೆಯ ವಾತಾವರಣ ನಿರ್ವಣವಾಗಲೆಂದು ಪ್ರಾರ್ಥಿಸಿದರು. ಭಕ್ತರು ದೀಡ ನಮಸ್ಕಾರ ಹಾಕಿ ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಮುಂಭಾಗದಲ್ಲಿ ಭಕ್ತರಿಗೆ ಪಾನಕ ವಿತರಿಸಲಾಯಿತು.

ಜಾತ್ರಾ ಮಹೋತ್ಸವ ನಿಮಿತ್ತ ಮೇ 7ರಂದು ಬೆಳಗ್ಗೆ ಚೌತಿ ಕಟ್ಟಿಗೆ ದೇವಿಯ ಆಗಮನ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಡೊಳ್ಳಿನ ಮಜಲಿನೊಂದಿಗೆ ಮೆರವಣಿಗೆ ಮುಖಾಂತರ ದೇವಿಯ ಆಗಮನವಾಗಲಿದೆ. ರಾತ್ರಿ 10 ಗಂಟೆಗೆ ಶ್ರೀ ದುರ್ಗಾದೇವಿ ಯುವ ನಾಟ್ಯ ಸಂಘದಿಂದ ಹಾಲುಮತದ ಹುಲಿ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 8ರಂದು ಸಂಜೆ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮೇ 12ರಂದು ದುರ್ಗಾ ದೇವಿಯು ಮುತ್ತೈದೆಯಾಗಿ ಗುಡಿ ತುಂಬುವಳು.