ಬಾಗಲಕೋಟೆ ನಗರದ ಬಿವಿವಿ ಸಂಘದ ಆವರಣದಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ಪ್ರಾದೇಶಿಕ ವ್ಯವಸ್ಥಾಪಕ ಎನ್.ಪ್ರದೀಪ ಅವರು ಮೈಕ್ರೋಸ್ಕೋಪ್‌ಗಳನ್ನು ಪುಟ್ಟರಾಜ ಗವಾಯಿ ನೇತ್ರದಾನ ಸಂಸ್ಥೆಯ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರಿಗೆ ಹಸ್ತಾಂತರಿಸಿದರು. ಉಪಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ವಿಭಾಗೀಯ ಮ್ಯಾನೇಜರ್ ಸತೀಶ ಕಾಮತ್, ಬೆಳಗಾವಿ ವಿಭಾಗದ ಸಹಾಯಕ ಮ್ಯಾನೇಜರ್ ರತನ್ ರಾಮಗೊಂಡ ಇತರರು ಇದ್ದರು. 
ಜಿಲ್ಲೆ

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ಕೊಡುಗೆ

ಬಾಗಲಕೋಟೆ: ನಗರದ ಪುಟ್ಟರಾಜ ಗವಾಯಿ ನೇತ್ರದಾನ ಸಂಸ್ಥೆಗೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ವತಿಯಿಂದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್‌ಆರ್) ಲೆಜೆಂಡ್ ಟ್ರುಗ್ಲೋ ಎಂದು ಕರೆಯಲಾಗುವ 50 ಲಕ್ಷ ರೂ. ಮೌಲ್ಯದ ಎರಡು ಅತ್ಯಾಧುನಿಕ ನೇತ್ರ ಶಸಚಿಕಿತ್ಸಾ ಮೈಕ್ರೋಸ್ಕೋಪ್‌ಗಳನ್ನು ಶುಕ್ರವಾರ ಕೊಡುಗೆಯಾಗಿ ನೀಡಲಾಯಿತು.

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಪ್ರಾದೇಶಿಕ ವ್ಯವಸ್ಥಾಪಕ ಎನ್.ಪ್ರದೀಪ ಅವರು ಮೈಕ್ರೋಸ್ಕೋಪ್‌ಗಳನ್ನು ಪುಟ್ಟರಾಜ ಗವಾಯಿ ನೇತ್ರದಾನ ಸಂಸ್ಥೆ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರಿಗೆ ಹಸ್ತಾಂತರಿಸಿದರು.

ಬಹಳ ಕ್ಲಿಷ್ಟಕರವಾದ ಕಣ್ಣಿನ ಶಸಚಿಕಿತ್ಸೆಯನ್ನು ಈ ಮೈಕ್ರೋಸ್ಕೋಪ್ ಸಹಾಯದಿಂದ ಸುಲಭವಾಗಿ ಮಾಡಬಹುದು. ಶಸಚಿಕಿತ್ಸೆ ಸಂದರ್ಭ ವೈದ್ಯರು ರೋಗಿಯ ಕಣ್ಣಿನ ವಿವಿಧ ಭಾಗಗಳನ್ನು ಪರಿಣಾಮಕಾರಿಯಾಗಿ ವೀಕ್ಷಿಸಲು ಈ ಯಂತ್ರದ ಸಹಾಯದಿಂದ ಸಾಧ್ಯವಾಗುತ್ತದೆ. ಗುಣಾತ್ಮಕ ಮತ್ತು ಸ್ಪಷ್ಟ ವೀಕ್ಷಣೆ ಸಾಧ್ಯವಾಗುವುದರಿಂದ ವೈದ್ಯರು ರೋಗಿಯ ನೇತ್ರ ತಪಾಸಣೆಯಲ್ಲಿ ಉತ್ತಮ ನಿರ್ಣಯಕ್ಕೆ ಬರಲು ಅನುಕೂಲವಾಗುವುದು ಸಂಸ್ಥೆ ವೈದ್ಯರು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಈ ಮೈಕ್ರೋಸ್ಕೋಪ್‌ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಸಮಾಜದ ಆರೋಗ್ಯ ಬಲವರ್ಧನೆಯಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ನವರು ಮಹತ್ವದ ಕಾಣಿಕೆ ನೀಡಿದಂತಾಗಿದೆ. ಪುಟ್ಟರಾಜ ಗವಾಯಿ ನೇತ್ರದಾನ ಸಂಸ್ಥೆ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, 20 ವರ್ಷಗಳಿಂದ ನೇತ್ರ ಶಸಚಿಕಿತ್ಸೆಯನ್ನು ಉಚಿತವಾಗಿ ಮಾಡುತ್ತಿದೆ. ನೇತ್ರದಾನಿಗಳಿಂದ ಅವರ ಮರಣಾನಂತರ ನೇತ್ರಗಳನ್ನು ಪಡೆದು ದೃಷ್ಟಿಹೀನರಿಗೆ ಅಳವಡಿಸುತ್ತಿದೆ. ಈಗಾಗಲೇ ನೂರಾರು ದೃಷ್ಟಿಹೀನರಿಗೆ ದೃಷ್ಟಿ ಒದಗಿಸಲಾಗಿದ್ದು, ಸಾವಿರಾರು ಕಣ್ಣಿನ ಪೊರೆ ನೇತ್ರ ಶಸಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗಿದೆ. ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯವರು ಪುಟ್ಟರಾಜ ಗವಾಯಿ ನೇತ್ರದಾನ ಸಂಸ್ಥೆಯ ಅಭಿಯಾನಕ್ಕೆ ಸಹಕಾರ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಸ್ಥೆ ಉಪಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ವಿಭಾಗೀಯ ಮ್ಯಾನೇಜರ್ ಸತೀಶ ಕಾಮತ್, ಬೆಳಗಾವಿ ವಿಭಾಗದ ಸಹಾಯಕ ಮ್ಯಾನೇಜರ್ ರತನ್ ರಾಮಗೊಂಡ, ಎಸ್.ಎನ್.ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ಎಚ್.ಎಸ್.ಕೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ನೇತ್ರ ವಿಭಾಗದ ಮುಖ್ಯಸ್ಥ ಡಾ.ಬ್ರಿಜೇಶ ಪಾಟೀಲ ಉಪಸ್ಥಿತರಿದ್ದರು.