ಹೊಸಪೇಟೆ: ವಿವಾಹ ವಿಚ್ಛೇದನಕ್ಕಾಗಿ ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದ ಎರಡು ಜೋಡಿಗಳನ್ನು ಲೋಕ ಅದಾಲತ್‌ನಲ್ಲಿ ಮತ್ತೆ ಒಗ್ಗೂಡಿಸಲಾಯಿತು.
ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಜಾತಪ್ಪ ಕೋಗಳಿ ಮತ್ತು ಕೊಟ್ರಮ್ಮ ದಂಪತಿಯ ಇಬ್ಬರು ಪುತ್ರಿಯರಾದ ಅಶ್ವಿನಿ ಮತ್ತು ನಂದಿನಿ ಎಂಬುವವರನ್ನು ಹುಬ್ಬಳ್ಳಿಯ ಶ್ರೀಧರ್ ಕೆರೂರ್-ಶಶಿಧರ್ ಕೆರೂರ್ ಎಂಬ ಸಹೋದರರಿಗೆ ಮದುವೆ ಮಾಡಿಕೊಡಲಾಗಿತ್ತು.ಆರಂಭದಲ್ಲಿ ಚೆನ್ನಾಗಿದ್ದರಾದರೂ, ಒಂದೆರಡು ವರ್ಷಗಳ ಬಳಿಕ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಆರಂಭಗೊಂಡು, ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. ಒಟ್ಟಾಗಿ ಜೀವನ ಸಾಗಿಸಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಕಂದಕ ಸೃಷ್ಟಿಯಾಗಿತ್ತು.
ಇದನ್ನೂ ಓದಿ: ಲೋಕ ಅದಾಲತ್ ಜಾಗೃತಿ ಜಾಥಾ
ಹಾಗಾಗಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಎರಡು ಜೋಡಿಗೆ ಆರು ವರ್ಷದ ತಲಾ ಒಬ್ಬ ಮಗನಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಸತಿ-ಪತಿಗಳ ಸಂಧಾನಕ್ಕೆ ಪ್ರಯತ್ನಿಸಿತ್ತು. ಅದರ ಫಲವಾಗಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ಉಭಯ ದಂಪತಿಗಳು ಸಂಧಾನಕ್ಕೆ ಒಟ್ಟಾಗಿ ಬಾಳುವ ತೀರ್ಮಾನಕ್ಕೆ ಬಂದಿದ್ದಾರೆ. ಅದರಂತೆ ನ್ಯಾಯಾಲಯದ ಎದುರು ಪರಸ್ಪರ ಒಪ್ಪಿಗೆ ಸೂಚಿಸಿದ್ದು, ಹೊಸಪೇಟೆಯ 2ನೇ ಹೆಚ್ಚುವರಿ ನ್ಯಾಯಾಧೀಶ ಸಂಜೀವ ಕುಮಾರ್ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಿಸಿಕೊಳ್ಳುವ ಮೂಲಕ ಮತ್ತೆ ಒಂದಾದರು.