ಸಿಂಧನೂರಿನ ಎಫ್‌ಆರ್‌ಸಿಎಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಎಫ್‌ಆರ್‌ಸಿಎಸ್ ಕ್ಲಬ್ ಅಧ್ಯಕ್ಷ ಸಿ.ಟಿ.ಪಾಟೀಲ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಇತರರಿದ್ದರು. 
ಜಿಲ್ಲೆ

ಆಟಗಾರರ ಕೌಶಲ ಪ್ರದರ್ಶನಕ್ಕೆ ಪಂದ್ಯಾವಳಿ ಸಹಕಾರಿ

Kopala - Desk - Eraveni

ಸಿಂಧನೂರು: ಗ್ರಾಮೀಣ ಭಾಗದ ಬ್ಯಾಡ್ಮಿಂಟನ್ ಆಟಗಾರರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎಫ್‌ಆರ್‌ಸಿಎಸ್ ಕ್ಲಬ್ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಎಫ್‌ಆರ್‌ಸಿಎಸ್ ಕ್ಲಬ್‌ನಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಬ್ಯಾಡ್ಮಿಂಟನ್ ಪಂದ್ಯಾವಳಿ ಆಟಗಾರರ ಕೌಶಲ ಪ್ರದರ್ಶನಕ್ಕೆ ಸಹಕಾರಿಯಾಗಿವೆ.

ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಕನಸು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗದೆ ಎಲೆಮರೆ ಕಾಯಿಯಂತೆ ಉಳಿದಿರುವ ಉದಯೋನ್ಮುಖ ಪ್ರತಿಭೆಗಳನ್ನು ಇಂಥ ಟೂರ್ನಿಗಳು ಹೆಕ್ಕಿ ತೆಗೆಯಬಲ್ಲವು. ಈ ಹಿಂದೆಯೂ ರಾಜ್ಯ ಮಟ್ಟದ ಟೆನ್ನಿಸ್, ಬ್ಯಾಡ್ಮಿಂಟನ್ ಯಶಸ್ವಿಯಾಗಿ ನಡೆಸಿದ ಕೀರ್ತಿ ಎಫ್‌ಆರ್‌ಸಿಎಸ್‌ಗೆ ಇದೆ ಎಂದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಈ ಹಿಂದೆ ಬೆಂಗಳೂರಿನಂಥ ನಗರದಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿ ನಡೆಯುವ ಮೈದಾನ ಇದ್ದವು. ಈಗ ಸಿಂಧನೂರಿನಲ್ಲೇ ರಾಷ್ಟ್ರ, ರಾಜ್ಯ ಮಟ್ಟದ ಟೆನ್ನಿಸ್, ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಸುವ ಸುಸಜ್ಜಿಯ ಮೈದಾನ, ವ್ಯವಸ್ಥೆ ಇರುವುದು ಸಂತಸ ಎಂದು ತಿಳಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಎಫ್‌ಆರ್‌ಸಿಎಸ್ ಅಧ್ಯಕ್ಷ ಸಿ.ಟಿ.ಪಾಟೀಲ್, ಕಾರ್ಯದರ್ಶಿ ಬಸವರಾಜ ಸಿದ್ಧಾಂತಿಮಠ, ಆರ್.ಸಿ.ಪಾಟೀಲ್, ಲಿಂಗರಾಜ ಉದ್ಬಾಳ, ಕೇಶವರಡ್ಡಿ, ಶೇಖಸಾಬ್ ಮುಳ್ಳೂರು, ಎಸ್.ಶರಣೇಗೌಡ ಇದ್ದರು.