ಪುತ್ತೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸಾಽ ಮಾತಾನಂದಮಯಿಯವರ ಮಾರ್ಗದರ್ಶನದೊಂದಿಗೆ ೨೦೧೧ರಲ್ಲಿ ಪ್ರಾರಂಭವಾದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ೨೦೨೪-೨೦೨೫ನೇ ಸಾಲಿನಲ್ಲಿ ಸಾರ್ವಕಾಲಿಕ ಸಾಧನೆಯನ್ನು ಮಾಡಿರುತ್ತದೆ. ೨೦೨೪-೨೦೨೫ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.೫.೫೦ ಕೋಟಿ ಲಾಭ ಗಳಿಸಿ ಕಳೆದ ಸಾಲಿಗೆ ಹೋಲಿಸಿದರೆ ಶೇ.೨೧ ಏರಿಕೆಯಾಗಿರುತ್ತದೆ ಎಂದು ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ ಹೇಳಿದರು.
ಸಹಕಾರಿಯ ಆಡಳಿತ ಕಚೇರಿಯಲ್ಲಿ ಅವಲೋಕನ ಸಭೆಯಲ್ಲಿ ಮಾತನಾಡಿದರು. ಸಹಕಾರಿ ೬೭೩.೫೨ ಕೋಟಿ ರೂ. ವ್ಯವಹಾರವನ್ನು ದಾಖಲಿಸಿದೆ ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ಶೇ.೨೨ ಏರಿಕೆ ಕಂಡಿದೆ. ಸುಮಾರು ೨೩ ಶಾಖೆಗಳ ಮೂಲಕ ೩೬೬.೫೫ ಕೋಟಿ ರೂ. ಠೇವಣಿ ಸಂಗ್ರಹಿಸಿ, ೩೦೬.೯೭ ಕೋಟಿ ರೂ. ಸಾಲ ಮತ್ತು ಮುಂಗಡಗಳೊಂದಿಗೆ, ಪಾಲು ಬಂಡವಾಳ ರೂ.೨.೨೯ ಕೋಟಿ, ನಿಧಿಗಳು ರೂ.೧೫.೬೪ ಕೋಟಿ ಮತ್ತು ದುಡಿಯುವ ಬಂಡವಾಳ ರೂ.೩೮೪.೫೦ ಕೋಟಿಯನ್ನು ಹೊಂದಿರುತ್ತದೆ. ಎಲ್ಲಾ ಶಾಖೆಗಳು ಗಣಕೀಕೃತಗೊಳಿಸಿ ಕೋರ್ ಸಿಸ್ಟಂ ಸಾಫ್ಟ್‌ವೇರ್ ಅಳವಡಿಸಿದೆ. ಪ್ರತಿ ವರ್ಷವು ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿಯನ್ನು ಪಡೆದಿದೆ. ಕಳೆದ ವರ್ಷ ಸದಸ್ಯರಿಗೆ ಶೇ.೨೧ ಡಿವಿಡೆಂಡ್ ನೀಡಿರುತ್ತದೆ. ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಸೌಹಾರ್ದ ಸಹಕಾರ ಸಂಘ ಪ್ರಶಸ್ತಿ ಮತ್ತು ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಉತ್ತಮ ಸೌಹಾರ್ದ ಪ್ರಶಸ್ತಿ ಪಡೆದಿರುತ್ತದೆ ಎಂದರು.
ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು ೭೮೭೪ ಒಡಿಯೂರು ವಿಕಾಸವಾಹಿಸಿ ಸ್ವ-ಸಹಾಯ ಗುಂಪುಗಳಲ್ಲಿ ೬೪,೦೦೦ಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಉಳಿತಾಯ ಮಾಡಿಕೊಂಡು ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಸಾಲವನ್ನು ಪಡೆದು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿಕೊಂಡು ಸಂಸ್ಕಾರಯುತ ಜೀವನವನ್ನು ಸಾಗಿಸುತ್ತಿದ್ದಾರೆ. ಸಹಕಾರಿಯ ಆಡಳಿತ ಕಚೇರಿ ಮತ್ತು ಪಂಪ್‌ವೆಲ್ ಶಾಖೆಯು ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಲೋಟಸ್ ಗ್ಯಾಲಕ್ಸಿಯಲ್ಲಿ ಸುಮಾರು ೭೦೦೦ ಚ.ಅಡಿ ವಿಶಾಲ ಕಟ್ಟಡ ಕೋಣೆಗಳನ್ನು ಸ್ವಂತಕ್ಕೆ ಖರೀದಿಸಿ, ಹವಾನಿಯಂತ್ರಿತ ಸುಸಜ್ಜಿತ ಆತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರ್ಯಾಚರಿಸುತ್ತಿದೆ. ಸಹಕಾರಿಯ ೫ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಸಹಕಾರಿಯ ಅಭಿವೃದ್ಧಿ ಮತ್ತು ಕೆಲಸದ ಕೌಶಲ ಗಮನಿಸಿ, ರಾಜ್ಯದ ಅನೇಕ ಸೌಹಾರ್ದ ಸಹಕಾರಿಗಳು ನಮ್ಮ ಸಂಸ್ಥೆಗೆ ಅಧ್ಯಯನ ಪ್ರವಾಸಕ್ಕೆ ಬರುತ್ತಿದ್ದು, ಅವರಿಗೆ ಮೌಲ್ಯಯುತವಾದ ತರಬೇತಿ ನೀಡಲಾಗುತ್ತಿದೆ ಎಂದರು.
ಉಪಾಧ್ಯಕ್ಷ ಲಿಂಗಪ್ಪಗೌಡ ಪನೆಯಡ್ಕ, ಸದಸ್ಯರಾದ ಲೋಕನಾಥ ಶೆಟ್ಟಿ ಮಂಗಳೂರು, ವೇಣುಗೋಪಾಲ ಮಾರ್ಲ, ಸೇರಾಜೆ ಗಣಪತಿ ಭಟ್, ಮುಖ್ಯಕಾರ್ಯನಿರ್ವಹಣಾಽಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್ ಹಾಗೂ ಹಿರಿಯ ಶಾಖಾಽಕಾರಿಗಳು ಉಪಸ್ಥಿತರಿದ್ದರು.
ಕೃಷಿ ಕೌಶಲ ತರಬೇತಿ
ಸಮಗ್ರ ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತೆ ಹಾಗೂ ಮಣ್ಣಿನ ಫಲವತ್ತತೆ ಕಾಪಾಡುವಂತೆ ರೈತರಿಗೆ ಅವರ ಜಮೀನಿನಲ್ಲಿ ತೋಟದಲ್ಲಿ ಪಾಠ ಎನ್ನುವ ಶಿರೋನಾಮೆಯಲ್ಲಿ ಕೃಷಿ ವಿಜ್ಞಾನಿಗಳಿಂದ ತರಬೇತಿ ನೀಡಿ ರೈತರನ್ನು ಪ್ರೋತ್ಸಾಹಿಸಿರುವುದು ಮತ್ತು ಸಹಕಾರಿಯ ಸಿಬ್ಬಂದಿಯನ್ನು ಕೃಷಿ ವಿಜ್ಞಾನ ಕೇಂದ್ರ ಮೂಲಕ ಕೃಷಿ ವಿಷಯದಲ್ಲಿ ದೇಸಿ ಕೋರ್ಸ್ ಮೂಲಕ ತರಬೇತುಗೊಳಿಸಿ, ಸಿಬ್ಬಂದಿಗಳನ್ನು ಕೃಷಿಕರ ಸೇವೆಗೆ ಸಿದ್ಧಪಡಿಸಲಾಗುತ್ತಿದೆ.