ಜಿಲ್ಲೆ

ಎಲ್ಲ ರೀತಿಯಲ್ಲಿ ಬಲಿಷ್ಠಗೊಳ್ಳಬೇಕು ತಳಹದಿ ಶಿಕ್ಷಣ - ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ

Mangaluru - Nishantha Narayana

ವಿಟ್ಲ: ಆದರ್ಶ ರಾಷ್ಟ್ರದ ತಳಹದಿ ಶಿಕ್ಷಣದಲ್ಲಿದ್ದು, ಅದನ್ನು ಎಲ್ಲ ರೀತಿಯಲ್ಲಿ ಬಲಿಷ್ಠಗೊಳಿಸಬೇಕು. ಶಿಕ್ಷಣ ಆರ್ಥಿಕತೆಯ ಹಿಂದೆ ಹೋಗದೆ, ಆಧ್ಯಾತ್ಮದ ಬುನಾದಿಯನ್ನು ಹೊಂದಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದಾಗ ಏಕರೂಪದ ಶಿಕ್ಷಣ ನೀಡಬಹುದು. ನಿತ್ಯ ಕಲಿಯುವ ವಿದ್ಯಾರ್ಥಿಗಳಾದಾಗ ಆದರ್ಶ ಶಿಕ್ಷಕರಾಗಬಹುದು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾಸಂಸ್ಥೆಗಳ ವಾರ್ಷಿಕ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಾದ್ವಿ ಮಾತಾನಂದಮಯೀ ಆಶೀರ್ವಚನ ನೀಡಿ, ಸುಸಂಸ್ಕೃತ ವ್ಯಕ್ತಿಯಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂಬ ಕಲ್ಪನೆಯಲ್ಲಿ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ. ಗುರುಕುಲದ ಮೂಲ ತಳಪಾಯವನ್ನು ಭದ್ರಪಡಿಸುವ ಕಾರ್ಯ ಮಾಡಲಾಗುತ್ತಿದೆ. ವಾರ್ಷಿಕೋತ್ಸವದ ಮೂಲಕ ಪ್ರತಿಭೆಯ ಅನಾವರಣ ಮಾಡಲಾಗುತ್ತದೆ. ಮಕ್ಕಳ ಪರಿಶುದ್ಧ ಮನಸ್ಸಿಗೆ ಸಂಸ್ಕಾರ ನೀಡುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಥಾಣೆ ಉದ್ಯಮಿ ಮೋಹನ ಹೆಗ್ಡೆ, ಮಂಗಳೂರು ಉದ್ಯಮಿ ಬಿ.ಎನ್.ಸೋಮನಾಥ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ್ ರೈ, ಕ್ಷೇತ್ರದ ಭಕ್ತರಾದ ಭರತ್ ಭೂಷಣ್, ಗೀತಾ ಭರತ್ ಭೂಷಣ್ ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಮುಖ್ಯಶಿಕ್ಷಕಿ ರೇಣುಕಾ ಎಸ್.ರೈ ವರದಿ ವಾಚಿಸಿದರು. ಶಿಕ್ಷಕಿ ಅನಿತಾ ಬಹುಮಾನ ಪಟ್ಟಿ ಓದಿದರು. ಶಿಕ್ಷಕ ಶೇಖರ್ ಬಾಯಾರು ವಂದಿಸಿದರು. ಶಿಕ್ಷಕ ಮುರಳೀಧರ ನಿರೂಪಿದರು.