ಕೆ.ಆರ್.ಪೇಟೆ: ತಾಲೂಕಿನ ಅಂಚೆಮುದ್ದನಹಳ್ಳಿಯ ಇಟ್ಟಿಗೆ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾದ ಮೂಲದ ದಂಪತಿಯನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ತಹಸೀಲ್ದಾರ್ ನಿಸರ್ಗಪ್ರಿಯ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಗ್ರಾಮದ ಯೋಗೇಂದ್ರ ಅವರ ಮಾಲೀಕತ್ವದ ಇಟ್ಟಿಗೆ ತಯಾರಿಕೆ ಘಟಕದಲ್ಲಿ ಒಡಿಶಾ ರಾಜ್ಯದ ಬಾಲಂಗೀರ್ ಗ್ರಾಮದ ನರೇಂದ್ರ ಮಹಾಕೂರ್, ಆತನ ಪತ್ನಿ ನಂದಿನಿ ಮಹಾಕೂರ್ ಐದು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಈ ದಂಪತಿಗೆ ಮೂರು ವರ್ಷದ ಮಗಳಿದ್ದು, ಕುಟುಂಬ ಘಟಕದ ಬಳಿಯಲ್ಲಿಯೇ ವಾಸವಿತ್ತು.
ಆದರೆ ಈ ದಂಪತಿಯು ‘ಮಾಲೀಕ ಯೋಗೇಂದ್ರ ಸಂಬಳ ಕೊಡದೆ ಜೀತದಾಳುಗಳಂತೆ ನಮ್ಮನ್ನು ದುಡಿಸಿಕೊಳ್ಳುತ್ತಿದ್ದಾನೆ. ನಮ್ಮ ಮೇಲೆ ದೌರ್ಜನ್ಯ ಮಾಡಿ ಹಲ್ಲೆ ನಡೆಸಿದ್ದಾನೆ. ನಮ್ಮನ್ನು ಇಲ್ಲಿಂದು ಬಿಡುಗಡೆ ಮಾಡಿಸಬೇಕೆಂದು’ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ, ಕೆ.ಆರ್. ಪೇಟೆ ಗ್ರಾಮಾಂತರ ಠಾಣೆಯ ಸಿಪಿಐ ಜಗದೀಶ್ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ತಂಡ ಗುರುವಾರ ಇಟ್ಟಿಗೆ ಭಟ್ಟಿಗೆ ತೆರಳಿ ಪರಿಶೀಲಿಸಿತು. ಕೂಲಿಕಾರ ದಂಪತಿ ನರೇಂದ್ರ ಹಾಗೂ ನಂದಿನಿ ಮಹಾಕುರ್ ಅವರಿಂದ ಅಧಿಕಾರಿಗಳು ಮಾಹಿತಿ ಪಡೆದರು. ಜತೆಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಇತರ ಕೆಲಸಗಾರರನ್ನು ವಿಚಾರಿಸಿ ಮಾಲೀಕ ಸಂಬಳ ನೀಡುತ್ತಿರುವ ಬಗ್ಗೆ ಅಧಿಕಾರಿ ತಂಡ ಮಾಹಿತಿ ಸಂಗ್ರಹಿಸಿತು.
ಬಳಿಕ ಮಾಲೀಕ ಯೋಗೇಂದ್ರ ಅವರನ್ನು ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿತು. ‘ದಂಪತಿಯನ್ನು ಜೀತದಾಳಿನಂತೆ ನಡೆಸಿಕೊಂಡಿಲ್ಲ. ಕಾಲ ಕಾಲಕ್ಕೆ ಸರಿಯಾಗಿ ಸಂಬಳ ನೀಡಿದ್ದೇನೆ’ ಎಂದು ಮಾಲೀಕ ತಿಳಿಸಿದರು. ಕೂಲಿಕಾರ ದಂಪತಿ ಮೇಲೆ ಹಲ್ಲೆ, ದೌರ್ಜನ್ಯ ನಡೆದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಅಧಿಕಾರಿಗಳ ತಂಡ, ಆ ದಂಪತಿಯನ್ನು ಅಲ್ಲಿಂದ ಬಿಡುಗಡೆಗೊಳಿಸಿ ಒಡಿಶಾಗೆ ಕಳುಹಿಸಿಕೊಟ್ಟಿತು.