ಹುಣಸೂರು: ಮಹಾಶಿವರಾತ್ರಿಯ ಅಂಗವಾಗಿ ತಾಲೂಕಿನಾದ್ಯಂತ ಶಿವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ಶಿವರಾತ್ರಿಯಂದು ಬೆಳಗಿನಿಂದ ಶಿವ ದೇವಾಲಯಗಳಿಗೆ ಭಕ್ತಸಾಗರವೇ ಸೇರಿತ್ತು.
ಪಟ್ಟಣದ ಬ್ರಾಹ್ಮಣರ ಬೀದಿಯ ಲಕ್ಷ್ಮಣತೀರ್ಥ ನದಿತಟದಲ್ಲಿ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿರುವ ಚಂದ್ರಮೌಳೀಶ್ವರ ದೇವಾಲಯದಲ್ಲಿ ಜಾಗರಣೆ ಅಂಗವಾಗಿ ವಿವಿಧ ಪೂಜೆ, ಹೋಮ-ಹವನ ನಡೆಯಿತು.
ಮೈಸೂರು ರಸ್ತೆಯಲ್ಲಿರುವ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದಲೇ ಭಕ್ತಸಾಗರ ಶಿವನ ದರ್ಶನಕ್ಕಾಗಿ ಸ್ನಾನಾದಿಗಳನ್ನು ಮುಗಿಸಿ ಮಡಿಬಟ್ಟೆಯಲ್ಲಿ ಬಂದರು. ಗೋಪಾಲಕೃಷ್ಣ, ಶ್ರೀ ಆಂಜನೇಯ ಹಾಗೂ ಸರ್ಪಸಮೇತವಿರುವ ಸುಬ್ರಮಣ್ಯೇಶ್ವರ, ನವಗ್ರಹ ದೇವರುಗಳೂ ಇರುವ ಈ ಪ್ರಾಂಗಣದಲ್ಲಿ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಪರವಶರಾದರು. ನವವಧುವರರು ಶ್ರದ್ಧಾಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರು. ಮಂಜುನಾಥಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಹೋಮ-ಹವನದ ನಂತರ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ನಡೆಸಲಾಯಿತು. ಪ್ರಸಾದ ವಿನಿಯೋಗ ನಡೆಯಿತು.
10 ಅಡಿ ಎತ್ತರದ ರುದ್ರಾಕ್ಷಿ ಶಿವಲಿಂಗ: ಪ್ರಜಾಪಿತ ಬ್ರಹ್ಕಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವವಿದ್ಯಾನಿಲಯ ಕೇಂದ್ರದ ಆವರಣದಲ್ಲಿ 10 ಅಡಿ ಎತ್ತರದ ರುದ್ರಾಕ್ಷಿ ಮಾಲೆಯಿಂದ ನಿರ್ಮಾಣಗೊಂಡ ಶಿವಲಿಂಗ ಶಿವಭಕ್ತರ ಮನತಣಿಸುವಲ್ಲಿ ಯಶಸ್ವಿಯಾಯಿತು. ಕುಟುಂಬಸಮೇತ ಬಂದ ಭಕ್ತರು ಶಿವಲಿಂಗ ಮುಂದೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಮೂರು ಕಡೆ ಕನ್ನಡಿಗಳನ್ನಿಟ್ಟು ಸಹಸ್ರ ಶಿವಲಿಂಗ ದರ್ಶನದ ವ್ಯವಸ್ಥೆಯೂ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಹುಣಸೂರು-ಕೆ.ಆರ್.ನಗರ ಮುಖ್ಯರಸ್ತೆಯ ಕಲ್ಕುಣಿಕೆ ಬಳಿಯಿರುವ ಶ್ರೀ ಶನೈಶ್ಚರ, ಗಣಪತಿ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯಕ್ಕೆ ಭಕ್ರಸಾಗರವೇ ಹರಿದುಬಂದಿತ್ತು. ಕಟ್ಟೆಮಳಲವಾಡಿ, ಗಾವಡಗೆರೆ, ಕಲ್ಕುಣಿಕೆ ಮತ್ತು ಪಟ್ಟಣದ ವಿವಿಧ ಬಡಾವಣೆಗಳಿಂದ ಭಕ್ತರು ತಂಡೋಪತಂಡವಾಗಿ ಬೆಳಗಿನಿಂದಲೇ ಬಂದು ವಿಶೇಷ ಪೂಜೆ ಸಲ್ಲಿಸಿದರು. ಪ್ರಸಾದ ವಿನಿಯೋಗ ನಡೆಯಿತು.
ಪಟ್ಟಣದ ಎಚ್.ಡಿ.ಕೋಟೆ ವೃತ್ತದ ಹಾಗೂ ಸೇತುವೆ ಶ್ರೀ ಕನ್ಯಕಾಪರಿಮೇಶ್ವರಿ ಅಮ್ಮನವರ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಭಕ್ತಾದಿಗಳು ಬಿಲ್ವಪತ್ರೆಯೊಂದಿಗೆ ಪೂಜಾಕಾರ್ಯ ನೆರವೇರಿಸಲು ದೇವಾಲಯಗಳಿಗೆ ಆಗಮಿಸಿದರು. ಬೆಳಗಿನಿಂದಲೂ ಪ್ರಸಾದ ವಿನಿಯೋಗ ನಡೆಯಿತು.
ವಿವಿದೆಡೆ ವಿಶೇಷ ಧಾರ್ಮಿಕ ಪೂಜೆ: ಚಿಕ್ಕಹುಣಸೂರಿನ ಮಲೈಮಹದೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಕೆಂಡಗಣ್ಣೇಶ್ವರ ಗದ್ದುಗೆಯಲ್ಲಿ ಮಹದೇಶ್ವರ ಮತ್ತು ಕೆಂಡಗಣ್ಣೇಶ್ವರ ಸ್ವಾಮಿಗೆ ಪೂಜೆ, ಕರಿಮುದ್ದನಹಳ್ಳಿ, ಗಾವಡಗೆರೆ, ಯಮಗುಂಬದ ಬವಸವೇಶ್ವರ ದೇವಾಲಯಗಳು, ರಾಮೇನಹಳ್ಳಿ ಬೆಟ್ಟದ ಓಂಕಾರೇಶ್ವರ ಸ್ವಾಮಿ ದೇವಾಲಯ, ಕಲ್ಲೂರಪ್ಪನಬೆಟ್ಟದ ಕಲ್ಲೂರೇಶ್ವರಸ್ವಾಮಿ ದೇವಾಲಯ, ತಟ್ಟೆಕೆರೆಯ ರಾಮಾಂಜನೇಯ ದೇವಾಲಯ, ಹನಗೋಡಿನ ಈಶ್ವರ, ಆಂಜನೇಯ, ಅಯ್ಯಪ ದೇಗುಲಗಳು, ಬಿಳಿಕೆರೆ ಸಮೀಪದ ಸೋನಳ್ಳಿ-ಎಲಚನಹಳ್ಳಿಯ ಬೆಟ್ಟದ ಮೇಲಿನ ಕಾಲಭೈರವೇಶ್ವರ ದೇವಾಲಯ ಹೊಸರಾಮೇನಹಳ್ಳಿಯ ಆಂಜನೇಯ, ರಾಮಪಟ್ಟಣದ ಮಹದೇಶ್ವರ, ಕಟ್ಟೆಮಳಲವಾಡಿಯ ಕೋಡಿ ಗಣಪತಿ ದೇವಾಲಯಗಳಲ್ಲು ವಿಶೇಷ ಪೂಜೆ ನಡೆಸಿ ಪ್ರಸಾದ ವಿನಿಯೋಗಿಸಲಾಯಿತು.