ಜಿಲ್ಲೆ

ಒತ್ತುವರಿ ತೆರವು ವೇಳೆ ಅಕ್ರಮ ನಲ್ಲಿ ಸಂಪರ್ಕ ಪತ್ತೆ

ಎನ್.ವೆಂಕಟೇಶ್

ಅಂಗಡಿ ಮಾಲೀಕರಿಂದ ನೀರಿನ ತೊಟ್ಟಿ ನಿರ್ಮಾಣ ಅವಾಕ್ಕಾದ ನಗರಸಭೆ ಪೌರಾಯುಕ್ತ, ಸಿಬ್ಬಂದಿ

ಚಿಂತಾಮಣಿ: ನಗರದ ಬೆಂಗಳೂರು ಜೋಡಿ ರಸ್ತೆಯಲ್ಲಿ ಮುಖ್ಯರಸ್ತೆ ಮತ್ತು ಪಾದಚಾರಿ ರಸ್ತೆಗಳ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವರು ಮುಖ್ಯರಸ್ತೆ ಮತ್ತು ಪಾದಚಾರಿ ರಸ್ತೆಯಲ್ಲೇ ತೊಟ್ಟಿ ನಿರ್ಮಾಣ ಮಾಡಿಕೊಂಡಿರುವುದಲ್ಲದೇ, ಅಕ್ರಮವಾಗಿ ನೀರಿನ ಸಂಪರ್ಕ ಪಡೆದುಕೊಂಡಿರುವುದು ಪತ್ತೆಯಾಗಿದೆ.

ಮಂಗಳವಾರ ಕಾರ್ಯಾಚರಣೆ ಕೈಗೊಂಡಿದ್ದ ಸಂದರ್ಭದಲ್ಲಿ ಅಂಗಡಿಗಳ ಎದುರು ಒತ್ತುವರಿ ಜಾಗದಲ್ಲಿ ತೊಟ್ಟಿ ನಿರ್ಮಾಣ ಮಾಡಿ, ನೀರು ಸಂಗ್ರಹಿಸಿರುವುದನ್ನು ಕಂಡು ಪೌರಾಯುಕ್ತ ಜಿ.ಎನ್.ಚಲಪತಿ ಹಾಗೂ ಇತರ ಸಿಬ್ಬಂದಿ ಅವಾಕ್ಕಾದರು.

ಹೋಟೆಲ್, ಬೇಕರಿ, ದ್ವಿಚಕ್ರ ವಾಹನಗಳ ವಾಷಿಂಗ್ ಸೇರಿ ಇತರ ಅಂಗಡಿಗಳ ಮಾಲೀಕರು ಪಾದಚಾರಿ ಮಾರ್ಗದಲ್ಲಿ ತೊಟ್ಟಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಲ್ಲದೆ, ಈ ತೊಟ್ಟಿಗಳನ್ನು ಸ್ವಚ್ಛಗೊಳಿಸದ ಕಾರಣ ನೀರು ಗಬ್ಬು ನಾರುತ್ತಿತ್ತು. ಕೆಲ ಹೋಟೆಲ್‌ನವರು ಈ ಕೆಟ್ಟ ನೀರನ್ನೇ ಬಳಕೆ ಮಾಡುತ್ತಿರುವ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರು

ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಪೌರಾಯುಕ್ತ ಚಲಪತಿ ಅವರು ಕೂಡಲೇ ಅಕ್ರಮ ಕೊಳಾಯಿ ಸಂಪರ್ಕಗಳನ್ನು ಕಡಿತಗೊಳಿಸಿದ್ದಲ್ಲದೇ, ನಲ್ಲಿ ಸಂಪರ್ಕ ಪಡೆದುಕೊಂಡಿರುವ ಬಗ್ಗೆ ದಾಖಲೆಗಳನ್ನು ಹಾಜರುಪಡಿಸುವಂತೆ ಅಂಗಡಿಗಳ ಮಾಲೀಕರಿಗೆ ಸೂಚಿಸಿದರು. ಬಹುತೇಕ ಅಂಗಡಿಗಳ ಮಾಲೀಕರು ದಾಖಲೆಗಳನ್ನು ಹಾಜರುಪಡಿಸಲು ವಿಲರಾದರು.

ಕ್ರಮಕ್ಕೆ ಸೂಚನೆ

ಸದರಿ ಸಂಪರ್ಕಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಹಾಗೂ ಬೇಕರಿ, ಹೋಟೆಲ್, ಕಾರು ಮತ್ತು ದ್ವಿಚಕ್ರ ವಾಹನಗಳ ವಾಷಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಕ್ರಮ ನೀರಿನ ಸಂಪರ್ಕ ಪಡೆದುಕೊಂಡಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸ್ಥಳದಲ್ಲಿದ್ದ ನಗರಸಭೆ ನೀರು ಸರಬರಾಜು ಮೇಲ್ವಿಚಾರಕ ಸಿ.ಕೆ.ಬಾಬು ಅವರಿಗೆ ಪೌರಾಯುಕ್ತರು ಸೂಚಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಪೌರಾಯುಕ್ತ ಚಲಪತಿ, ಜನನಿಬಿಡ ಪಾದಚಾರಿ ಮಾರ್ಗದಲ್ಲಿ ಅಕ್ರಮ ತೊಟ್ಟಿಗಳು ನಿರ್ಮಿಸಿಕೊಂಡವರಿಗೆ ಅಕ್ರಮವಾಗಿ ನಲ್ಲಿ ಸಂಪರ್ಕ ನೀಡಿರುವ ಸಿಬ್ಬಂದಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.