ಬೆಂಗಳೂರು:ಕ್ರಿಸ್ಮಸ್ ಹಾಗೂ ಹೊಸವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ದಿನದ ಸಾಂದರ್ಭಿಕ ಸನ್ನದುಗೆ (ಸಿಎಲ್-5) ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪರವಾನಗಿ ಕೋರಿ ಅಬಕಾರಿ ಇಲಾಖೆಗೆ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.
ಹೊಸ ವರ್ಷ ಸಂದರ್ಭದಲ್ಲಿ ಹೆಚ್ಚಿನ ಮದ್ಯ ವಹಿವಾಟು ನಡೆಯುತ್ತದೆ. ಇದನ್ನು ಮನಗಂಡು ಇಲಾಖೆ ಸಾಂದರ್ಭಿಕ ಸನ್ನದು ನೀಡಲಿದೆ. ಪರವಾನಗಿ ಪಡೆಯುವ ಕೆಲವರು, ಒಂದು ದಿನಕ್ಕೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಸಿಗುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಅಂದಾಜು 6-7 ಕೋಟಿ ರೂ. ಆದಾಯ ಬರಲಿದೆ. ಸಾಂದರ್ಭಿಕ ಸನ್ನದು ಮಂಜೂರು ಮಾಡಿರುವ ಸಂಬಂಧ ಸೂಕ್ತ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳ ಕೈಗೊಳ್ಳುವ ಬಗ್ಗೆ ಅಬಕಾರಿ ಇಲಾಖೆ, ಈಗಾಗಲೇ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದೆ.
ಕೆಲ ಷರತ್ತು:
ಸನ್ನದು ಮಂಜೂರು ಮಾಡುವ ವೇಳೆ ಇಲಾಖೆ ಕೆಲ ಷರತ್ತು ವಿಧಿಸಲಿದೆ. ಸನ್ನದು ಸ್ಥಳದಲ್ಲಿ ಮದ್ಯ, ಬಿಯರ್ ಸೇವನೆಗೆ ಸ್ಥಳಿಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ/ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕಿದೆ. ಇದು ಹೊಸ ವರ್ಷ, ಕ್ರಿಸ್ಮಸ್ಗೆ ಮಾತ್ರ ಅನ್ವಯವಾಗುತ್ತದೆ. ರೂಫ್ ಟಾಪ್ಗಳಿಗೆ ಸನ್ನದು ಮಂಜೂರು ಮಾಡುವ ವೇಳೆ ರೂಫ್ ಟಾಪ್ಗಳಲ್ಲಿ ಯಾವುದೇ ರೀತಿಯ ಅಡುಗೆ ಕೋಣೆ ಕಾರ್ಯನಿರ್ವಹಿಸಬಾರದು. ಒಲೆ, ಸಿಲಿಂಡರ್,ಬೆಂಕಿ ಉಪಕರಣಗಳು ಇರಕೂಡದು. ರೂಪ್ ಟಾಪ್ಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕಲ್ಪಿಸಿರುವ ಬಗ್ಗೆ ಖಾತರಿಪಡಿಸಿಕೊಂಡ ನಂತರವೇ ಸನ್ನದು ಮಂಜೂರು ಮಾಡಬೇಕು. ನಿಗದಿಪಡಿಸಿದ ಶುಲ್ಕ ಮತ್ತು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು. ಸನ್ನದುಗಳನ್ನು ಅನಧಿಕೃತ ಮದ್ಯ ಸೇವಿಸಲು ಅವಕಾಶ ನೀಡುವಂತಿಲ್ಲ. ಕೆಎಸ್ಬಿಸಿಎಲ್, ಸಿಎಲ್-2 ಹಾಗೂ ಸಿಎಲ್-11ಸಿ ಸನ್ನದುಗಳಿಂದ ಅಧಿಕೃತವಾಗಿ ಪಡೆದುಕೊಂಡ ಮದ್ಯ/ಬಿಯರ್ ಮಾತ್ರ ಬಳಸತಕ್ಕದ್ದು ಎಂದು ಇಲಾಖೆ ಹೇಳಿದೆ.