ಮಹಾನಗರ ಪಾಲಿಕೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೀರ್ಘ ಸರದಿಯಲ್ಲಿ ಕಾಯುವ ಪರಿಸ್ಥಿತಿ 
ಜಿಲ್ಲೆ

ಪಾಲಿಕೆಯಲ್ಲಿ ಜನನ, ಮರಣ ನೋಂದಣಿಗೆ ಅಡ್ಡಿ ಸಾರ್ವಜನಿಕರ ಪರದಾಟ

ಮಂಗಳೂರು: ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್‌ಐಆರ್ ಪ್ರಕ್ರಿಯೆಗೆ ನಿಯೋಜಿಸಿರುವ ಪರಿಣಾಮ, ಜನನ ಮತ್ತು ಮರಣ ನೋಂದಣಿ ಸೇವೆಗಳಿಗೆ ತೀವ್ರ ಅಡ್ಡಿಯಾಗಿದೆ. ಸಾಮಾನ್ಯವಾಗಿ ದಿನವಿಡೀ ಲಭ್ಯವಿದ್ದ ಅರ್ಜಿ ಸ್ವೀಕಾರದ ವ್ಯವಸ್ಥೆಯನ್ನು ಈಗ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಪಾಲಿಕೆ ಕಚೇರಿಯಲ್ಲಿ ಅಳವಡಿಸಿರುವ ನಾಮಫಲಕದಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ಈ ಸೀಮಿತ ಅವಧಿಯಲ್ಲಿ ಮಾತ್ರ ಜನನ ಮತ್ತು ಮರಣ ಪ್ರಮಾಣಪತ್ರಕ್ಕೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಇದರಿಂದ ಪ್ರತಿದಿನ ಬೆಳಗ್ಗೆಯೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೀರ್ಘ ಸರದಿಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
* ಸರದಿ ಬರುವ ಮುನ್ನವೇ ಕೌಂಟರ್ ಬಂದ್: ಜನನ ಪ್ರಮಾಣಪತ್ರಕ್ಕಾಗಿ ನವಜಾತ ಶಿಶುಗಳ ಪೋಷಕರು, ಮರಣ ಪ್ರಮಾಣಪತ್ರಕ್ಕಾಗಿ ಕುಟುಂಬ ಸದಸ್ಯರು, ಪಿಂಚಣಿ, ವಿಮೆ, ಬ್ಯಾಂಕ್ ಹಾಗೂ ಇತರೆ ಸರ್ಕಾರಿ ಕೆಲಸಗಳಿಗೆ ದಾಖಲೆ ಅಗತ್ಯವಿರುವ ನಾಗರಿಕರು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗುತ್ತಿದೆ. ಅರ್ಜಿ ಸ್ವೀಕಾರದ ಸಮಯ ಕಡಿಮೆಯಾಗಿರುವುದರಿಂದ ಅನೇಕರು ತಮ್ಮ ಸರದಿ ಬರುವ ಮುನ್ನವೇ ಕೌಂಟರ್ ಮುಚ್ಚುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರದ ವಿಶೇಷ ಕಾರ್ಯಗಳಿಗೆ ಸಿಬ್ಬಂದಿಯನ್ನು ನಿಯೋಜಿಸುವುದು ಅನಿವಾರ್ಯವಾದರೂ, ಸಾರ್ವಜನಿಕ ಸೇವೆಗಳ ನಿರಂತರತೆಯನ್ನು ಕಾಪಾಡುವ ಜವಾಬ್ದಾರಿಯೂ ಆಡಳಿತದ ಮೇಲಿದೆ. ಜನನ ಮತ್ತು ಮರಣ ಪ್ರಮಾಣಪತ್ರಗಳು ಕಾನೂನುಬದ್ಧ ಹಾಗೂ ತುರ್ತು ಅಗತ್ಯದ ದಾಖಲೆಗಳಾಗಿರುವುದರಿಂದ ಅವುಗಳ ವಿತರಣೆಯಲ್ಲಿ ವಿಳಂಬವಾದರೆ ನಾಗರಿಕರ ದೈನಂದಿನ ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀಳುತ್ತದೆ.
ತಾತ್ಕಾಲಿಕ ಸಿಬ್ಬಂದಿ ನಿಯೋಜನೆ, ಹೆಚ್ಚುವರಿ ಕೌಂಟರ್‌ಗಳ ಆರಂಭ ಅಥವಾ ಅರ್ಜಿ ಸ್ವೀಕಾರದ ಸಮಯ ವಿಸ್ತರಣೆ ಮಾಡಿದರೆ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ನಿವಾರಿಸಬಹುದು. ಆನ್‌ಲೈನ್ ಅರ್ಜಿ ಮತ್ತು ಪ್ರಮಾಣಪತ್ರ ವಿತರಣೆಯ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು. ಕೆಲವರು ಹಲವು ದಿನಗಳಿಂದ ಸತತವಾಗಿ ಕಚೇರಿಗೆ ಬರುತ್ತಿದ್ದರೂ ಕೆಲಸ ಆಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.