ಜಿಲ್ಲೆ

ವಿದ್ಯಾರ್ಥಿನಿಯಿಂದ ಡಿಸಿ ಕಾರ್ಯವೈಖರಿ ವೀಕ್ಷಣೆ: ಪ್ರಬಂಧ ಸ್ಪರ್ಧೆ ವಿಜೇತೆ ವಿದ್ಯಾಶ್ರೀಗೆ ಅವಕಾಶ

ಬೆಂಗಳೂರು ಗ್ರಾಮಾಂತರ
ವಿಶ್ವ ಯುವ ಕೌಶಲ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಡಿ.ಎಂ.ವಿದ್ಯಾಶ್ರೀ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರೊಂದಿಗೆ ಬುಧವಾರ ಒಂದು ದಿನ ಇದ್ದು ಜಿಲ್ಲಾಡಳಿತದ ಕಾರ್ಯವೈಖರಿ ವೀಕ್ಷಿಸುವ ಅಪೂರ್ವ ಅವಕಾಶ ದೊರೆಯಿತು.


ವಿಜೇತೆ ವಿದ್ಯಾಶ್ರೀ ಅವರನ್ನು ಜಿಲ್ಲಾಧಿಕಾರಿಯೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿತ್ತು. ಜಿಲ್ಲಾ ಕೌಶಲ ಅಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಈ ಸ್ಪರ್ಧೆ ಏರ್ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಅವರ ಕಚೇರಿಯಲ್ಲಿ ಇದ್ದು ಜಿಲ್ಲಾಧಿಕಾರಿಯ ದಿನದ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರ ಕಾರ್ಯ ಕಲಾಪಗಳನ್ನು ಹತ್ತಿರದಲ್ಲಿ ನೋಡುವ ಅವಕಾಶ ದೊರಕಿಸಿಕೊಡಲಾಯಿತು.

ನಿಮ್ಮ ಹಾಗೆ ಡಿಸಿ ಆಗಬೇಕು: ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಪಾಲಕರೊಂದಿಗೆ ಆಗಮಿಸಿದ ವಿದ್ಯಾಶ್ರೀ ಅವರನ್ನು ಜಿಲ್ಲಾಧಿಕಾರಿ ಆರ್.ಲತಾ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಆತ್ಮೀಯವಾಗಿ ಮಾತನಾಡಿದ ಜಿಲ್ಲಾಧಿಕಾರಿ ಮುಂದೆ ಏನಾಗಬೇಕೆಂದು ಬಯಸಿದ್ದೀರ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ, ನಾನು ನಿಮ್ಮ ಹಾಗೆ ಜಿಲ್ಲಾಧಿಕಾರಿ ಆಗಬೇಕು ಎಂದು ಕೊಂಡಿದ್ದೇನೆ ಎಂದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮಾಂತರ ಜಿಲ್ಲೆಯ ವಿವಿಧ ಇಲಾಖೆಗಳ ಆಂತರಿಕ ಸಭೆಗಳಲ್ಲಿ ವಿದ್ಯಾ, ಜಿಲ್ಲಾಧಿಕಾರಿ ಪಕ್ಕದಲ್ಲೇ ಕುಳಿತು ಎಲ್ಲವನ್ನು ವೀಕ್ಷಿಸಿದರು.

ಉನ್ನತ ವಿದ್ಯಾಭ್ಯಾಸಕ್ಕೆ ಪೂರಕ: ಇದೇ ವೇಳೆ ಅನಿಸಿಕೆ ಹಂಚಿಕೊಂಡ ವಿದ್ಯಾಶ್ರೀ ಜಿಲ್ಲಾಧಿಕಾರಿಯವರೊಂದಿಗೆ ಇಡೀ ಒಂದು ದಿನ ಇದ್ದು ಕಾರ್ಯ ಆಡಳಿತ ವೀಕ್ಷಿಸಲು ನನಗೆ ಅನುವು ಮಾಡಿಕೊಟ್ಟಿದ್ದು ಅತೀವ ಸಂತಸ ತಂದಿದೆ. ಇದು ನನಗೆ ಮುಂದಿನ ಉನ್ನತ ವಿದ್ಯಾಭ್ಯಾಸದ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಲಿದೆ ಎಂದು ವಿದ್ಯಾಶ್ರೀ ಅನಿಸಿಕೆ ಹಂಚಿಕೊಂಡರು.

ಉಜ್ವಲ ಭವಿಷ್ಯವಿದೆ: ಕೌಶಲ ಸ್ಫೂರ್ತಿ ಶೀರ್ಷಿಕೆಯಡಿ ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ವಿದ್ಯಾಶ್ರೀ ನಮ್ಮ ಎಲ್ಲ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವ ಅವಕಾಶ ಪಡೆದರು. ಅತ್ಯಂತ ಕ್ರಿಯಾಶೀಲವಾಗಿ ಎಲ್ಲದರಲ್ಲೂ ಭಾಗಿಯಾದ ರೀತಿ ಗಮನಿಸಿದರೆ ಮುಂದೆ ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.