Mahesh Shetty Timarodi : ಬಿಜಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಆಕ್ಷಪಾರ್ಹ ಹೇಳಿಕೆ ನೀಡಿದ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹೇಶ್ ತಿಮರೋಡಿ ಅವರನ್ನು ಬ್ರಹ್ಮಾವರ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅನೇಕ ಬಾರಿ ನೋಟಿಸ್ ನೀಡಿದರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ತಿಮರೋಡಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ತಿಮರೋಡಿ ಅವರನ್ನು ಕರೆದೊಯ್ಯುವಾಗ ಮಾತನಾಡಿದ ಅವರು ನನ್ನ ಪ್ರಾಣಕ್ಕೆ ಏನಾದರೂ ಆದರೆ ಅದಕ್ಕೆ ರಾಜ್ಯ ಸರ್ಕಾರ ಮತ್ತು ಬಿಜೆಪಿಯೇ ಕಾರಣ ಎಂದು ಹೇಳಿದರು.
ತಿಮರೋಡಿ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಉಜಿರೆಯಲ್ಲಿರುವ ಅವರ ಮನೆಗೆ ಹೋದಾಗ ಸ್ಥಳದಲ್ಲಿ ಹೈಡ್ರಾಮವೇ ನಡೆಯಿತು. 8 ವಾಹನಗಳಲ್ಲಿ 30 ಪೊಲೀಸರು ಹೋಗಿದ್ದರು. ಈ ವೇಳೆ ತಿಮರೋಡಿ ಬೆಂಬಲಿಗರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ವಾರೆಂಟ್ ಎಲ್ಲಿ ಎಂದು ಪ್ರಶ್ನಿಸುವ ಮೂಲಕ ಪೊಲೀಸರನ್ನು ತಡೆಯಲು ಯತ್ನಿಸಿದರು. ಅಲ್ಲದೆ, ವಶಕ್ಕೆ ಪಡೆಯದಂತೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಯೇ ಇದ್ದ ಗಿರೀಶ್ ಮಟ್ಟಣನವರ್ ಕೂಡ ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಸುಮಾರು ಅರ್ಧ ಗಂಟೆಗಳ ಕಾಲ ಸ್ಥಳದಲ್ಲಿ ಭಾರಿ ಹೈಡ್ರಾಮವೇ ನಡೆಯಿತು. ಅಂತಿಮವಾಗಿ ಪೊಲೀಸರು ಖಾಸಗಿ ಕಾರಿನಲ್ಲಿ ತಿಮರೋಡಿ ಅವರನ್ನು ಕರೆದೊಯ್ದರು. ಉಡುಪಿಯ ಎಸ್ ಪಿ ಸುಧಾಕರ್ ನಾಯಕ್ ನೇತೃತ್ವದ ತಂಡ ಆಗಮಿಸಿ ವಶಕ್ಕೆ ಪಡೆದಿದೆ.
ಆಗಸ್ಟ್ 16ರಂದು ತಿಮರೋಡಿ ಅವರು ಫೇಸ್ಬುಕ್ ಪೇಜ್ನಲ್ಲಿ ಬಿ.ಎಲ್. ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೆಟ್ಟ ಪದಗಳಿಂದ ನಿಂದಿಸಿದ್ದರು. ಇದಾದ ಬಳಿಕ ಉಡುಪಿಯ ಗ್ರಾಮಾಂತರ ಬಿಜೆಪಿ ಮಂಡಲಾಧ್ಯಕ್ಷ ರಾಜೀವ್ ಕುಲಾಲ್ ಎಂಬುವರು ದೂಡು ದಾಖಲಿಸಿದ್ದರು. ಹಿಂದು ಧರ್ಮದ ನಾಯಕನನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಕೇಳಿದ್ದರು. ಈ ಸಂಬಂಧ ತಿಮರೋಡಿಗೆ ವಿಚಾರಣೆಗೆ ಹಾಜರಾಗುವಂತೆ ಬ್ರಹ್ಮಾವರ ಪೊಲೀಸರು ನೋಟಿಸ್ ನೀಡಿದ್ದರು. ಆದರೆ, ನೋಟಿಸ್ಗೆ ಯಾವುದೇ ಉತ್ತರ ನೀಡದಿದ್ದಕ್ಕೆ ಪೊಲೀಸರೇ ಅವರ ಮನೆಗೆ ಬಂದು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)