RAJU ALAGUR 
ಜಿಲ್ಲೆ

ಜಾತ್ಯತೀತ-ಸಮಾಜವಾದಿ ಪದ ಕುರಿತ ಆಕ್ಷೇಪ, ದತ್ತಾತ್ರೇಯ ಹೊಸಬಾಳೆ ವಿರುದ್ಧ ವಾಗ್ದಾಳಿ, ಆರ್‌ಎಸ್‌ಎಸ್-ಬಿಜೆಪಿ ಸಂವಿಧಾನ ವಿರೋಧಿ ಎಂದ ರಾಜು ಆಲಗೂರ

ವಿಜಯಪುರ: ಸಂವಿಧಾನ ಪೀಠಿಕೆಯಲ್ಲಿರುವ ಜಾತ್ಯತೀತ ಹಾಗೂ ಸಮಾಜವಾದಿ ಪದಗಳನ್ನು ಕೈ ಬಿಡಬೇಕೆನ್ನುವ ಮೂಲಕ ಆರ್‌ಎಸ್‌ಎಸ್ ಮತ್ತೊಮ್ಮೆ ಸಂವಿಧಾನ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ರಾಜು ಆಲಗೂರ ಕಿಡಿಕಾರಿದರು.

ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದ ಪೀಠಿಕೆಯಲ್ಲಿರುವ ಜಾತ್ಯತೀತ ಹಾಗೂ ಸಮಾಜವಾದ ಪದ ಕೈ ಬಿಡಬೇಕೆಂದಿದ್ದು, ಇದರ ಹಿಂದೆ ಇಡೀ ಸಂವಿಧಾನವನ್ನೇ ಬದಲಿಸುವ ಹುನ್ನಾರ ಎದ್ದು ಕಾಣುತ್ತಿದೆ. ಇಂಥ ಸಂವಿಧಾನ ವಿರೋಧಿಗಳ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈ ಹಿಂದೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಂವಿಧಾನದ ಪ್ರತಿ ಸುಟ್ಟು ಹಾಕಿದವರು ಇದೇ ಮನುವಾದಿಗಳು.ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಸಂವಿಧಾನ ಬದಲಿಸುವುದಾಗಿ ಹೇಳಿದ್ದರು, ಬಳಿಕ ಅಮಿತ್ ಷಾ ಕೂಡ ಸಂಸತ್‌ನಲ್ಲಿ ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದರು. ಇದೀಗ ಹೊಸಬಾಳೆ ಸಹ ಸಂವಿಧಾನ ಪೀಠಿಕೆಯಲ್ಲಿನ ಜಾತ್ಯತೀತ ಹಾಗೂ ಸಮಾಜವಾದ ಪದ ತೆಗೆಯಬೇಕೆಂದಿರುವುದು ಸಂವಿಧಾನ ವಿರೋಧಿ ನಿಲುವು ಸ್ಪಷ್ಟಪಡಿಸುತ್ತದೆ ಎಂದರು.

ದೇಶದಲ್ಲಿ ಮತ್ತೆ ಮನುಸ್ಮತಿ ಜಾರಿಯಲ್ಲಿ ತರುವ ಹುನ್ನಾರ ನಡೆದಿದೆ. ಸಾಮಾಜಿಕ ನ್ಯಾಯದ ಪರ ಪ್ರಶ್ನೆ ಬಂದಾಗಲೆಲ್ಲ ಅದನ್ನು ವಿರೋಧಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಈ ದೇಶದ ಸಂವಿಧಾನ ದಲಿತ ನಾಯಕ ಡಾ.ಅಂಬೇಡ್ಕರ್ ಅವರು ಬರೆದರೆಂಬುದನ್ನು ಈ ಮನುವಾದಿಗಳಿಗೆ ಸಹಿಲಾಗುತ್ತಿಲ್ಲ. ಇತ್ತೀಚೆಗೆ ಸಂವಿಧಾನ ಅಂಬೇಡ್ಕರ್ ಒಬ್ಬರೇ ಬರೆದಿಲ್ಲ, ಬಿ.ಎನ್. ರಾವ್ ಕೂಡ ಬರೆದರೆಂದು ವಿವಾದ ಹುಟ್ಟುಹಾಕಿದವರು ಇದೇ ಮನುವಾದಿಗಳು. ಆದರೆ, ಸಂವಿಧಾನ ರಚನಾ ಸಮಿತಿಗೆ ರಾವ್ ಸದಸ್ಯರಲ್ಲ; ವೈಸರಾಯ್ ವೇವರ್ ಸಲಹಾ ಸಮಿತಿಗೆ ಬಿ.ಎನ್. ರಾವ್ ಅವರನ್ನು ನಾಮ ನಿರ್ದೇಶನ ಮಾಡಿದ್ದರು. ಆದರೆ, ಅಂಬೇಡ್ಕರ್ ಅಂಬೇಡ್ಕರ್ ಚುನಾಯಿತ ಸದಸ್ಯರು ಎಂದರು.

ಬಿ.ಎನ್. ರಾವ್ ಅವರಿಗೆ ಕ್ಲರ್ಕ್ ಕೆಲಸ ನೀಡಲಾಗಿತ್ತು. ಟೈಪ್ ಮಾಡುವುದಷ್ಟೇ ಅವರ ಕೆಲಸ. ಸಂವಿಧಾನ ರಚನೆ ಸಮಿತಿಗೆ 299 ಜನರನ್ನು ಆಯ್ಕೆ ಮಾಡಲಾಗಿ ಅದರಲ್ಲಿ ಏಳು ಜನರನ್ನು ಕರುಡು ಸಮಿತಿಗೆ ಆಯ್ಕೆ ಮಾಡಿದಾಗ ಅಂಬೇಡ್ಕರ್ ಅವರನ್ನೇ ಚೇರಮನ್ ಆಗಿ ಆಯ್ಕೆ ಮಾಡಲಾಯಿತು. ಈ 299 ಜನರಲ್ಲಾಗಲಿ ಕರುಡು ಸಮಿತಿ ಸದಸ್ಯರಲ್ಲಾಗಲಿ ರಾವ್ ಅವರ ಹೆಸರು ಇರಲಿಲ್ಲ ಎಂದರು.

ಬ್ರಾಹ್ಮಣಶಾಹಿಗಳು ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲವೆಂದು ಸುಳ್ಳು ಸುದ್ದಿ ಹರಡಿದ್ದಾರೆ. ಕರಡು ಸಮಿತಿಯ ಏಳು ಜನರಲ್ಲಿ ಯಾರೂ ಇರಲಿಲ್ಲವಾದ ಕಾರಣ ಏಕೈಕ ಸದಸ್ಯರಾಗಿ ಅಂಬೇಡ್ಕರ್ ಅವರು ಕೆಲಸ ಮಾಡಿದ್ದಾರೆ. ಹೀಗಾಗಿ ಈ ಮನುವಾದಿಗಳಿಗೆ ಅದನ್ನು ಅರಗಿಸಿಕೊಳ್ಳಲಾಗುತ್ತಿಲ್ಲವೆಂದರು.

ಜಾತ್ಯತೀತ ಹಾಗೂ ಸಮಾಜವಾದ ಪದ ಕೆಟ್ಟದಲ್ಲ. ಈ ಪದಗಳ ಕುರಿತು ಪದೇ ಪದೇ ಟೀಕೆ ಮಾಡುತ್ತಿದ್ದ ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರಕ್ಕೆ ಪ್ರತ್ಯುತ್ತರವಾಗಿ 1976 ರಲ್ಲಿ ಇಂದಿರಾಗಾಂಧಿ 42ನೇ ತಿದ್ದುಪಡಿ ಮೂಲಕ ಪೀಠಿಕೆಯಲ್ಲಿ ಸೇರಿಸಿದರು. ಇದೀಗ ಆ ಪದಗಳ ಬಗ್ಗೆ ಆಕ್ಷೇಪ ಎತ್ತುತ್ತಿರುವುದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಮನಃಸ್ಥಿತಿಯನ್ನು ತೋರಿಸುತ್ತದೆ. ಹೀಗಾಗಿ ಸಮಾನತೆ ಬಯಸುವವರು, ಅಧಿಕಾರ ಹಾಗೂ ಸಂಪತ್ತಿನ ಸಮಾನ ಹಂಚಿಕೆ ಬೇಕು ಎನ್ನುವವರು ಕೂಡಲೇ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಂದ ಹೊರಬರಬೇಕೆಂದರು.

ಮುಖಂಡರಾದ ಡಾ.ಗಂಗಾಧರ ಸಂಬಣ್ಣಿ, ಸಾಹೇಬಗೌಡ ಬಿರಾದಾರ, ತಮ್ಮಣ್ಣ ಮೇಲಿನಕೇರಿ, ವಸಂತ ಹೊನಮೋಡೆ, ಸುರೇಶ ಘೋಣಸಗಿ ಮತ್ತಿತರರಿದ್ದರು.