ಮದ್ದೂರು ಪಟ್ಟಣದ ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ತುರ್ತುಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಮೀನಾಕ್ಷಿ ಮಾತನಾಡಿದರು. ಕೋಕಿಲಾ ಅರುಣ್, ಟಿ.ಆರ್.ಪ್ರಸನ್ನಕುಮಾರ್, ವನಿತಾ ಇದ್ದರು. 
ಜಿಲ್ಲೆ

ಅಪೂರ್ಣ ಕಾಮಗಾರಿಗಳಿಗೆ ಬಿಲ್ ಪಾವತಿಗೆ ಆಕ್ಷೇಪ

ಮದ್ದೂರು: ಪಟ್ಟಣ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ 2025-26ನೇ ಸಾಲಿನ ಅನುದಾನಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆಯಲು ಶುಕ್ರವಾರ ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್ ಅಧ್ಯಕ್ಷತೆಯಲ್ಲಿ ತುರ್ತುಸಭೆ ಆಯೋಜಿಸಲಾಗಿತ್ತು.

ಸಭೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರಾದ ಎಂ.ಐ.ಪ್ರವೀಣ್, ಪ್ರಿಯಾಂಕಾ ಅಪ್ಪುಗೌಡ, ಮನೋಜ್, ನಂದೀಶ್ ಅವರು ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿರುವ ಕೆಲ ಕಾಮಗಾರಿಗಳನ್ನು ಗುತ್ತಿಗೆದಾರರು ಅಪೂರ್ಣಗೊಳಿಸಿದ್ದಾರೆ. ಆದರೂ ಸಂಬಂಧಪಟ್ಟ ಸದಸ್ಯರ ಗಮನಕ್ಕೂ ತರದೆ ಬಿಲ್ ಪಾವತಿ ಏಕೆ ಮಾಡಿದ್ದೀರಿ ಎಂದು ಮುಖ್ಯಾಧಿಕಾರಿ ಮೀನಾಕ್ಷಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದರಿಂದಾಗಿ ಕೆಲ ಕಾಮಗಾರಿಗಳು ಅಪೂರ್ಣವಾಗಿರುವುದರಿಂದ ವಾರ್ಡ್‌ಗಳಲ್ಲಿ ಸಾರ್ವಜನಿಕರು ನಮ್ಮನ್ನು ಕೇಳುತ್ತಾರೆ. ಏನು ಉತ್ತರಿಸಬೇಕು ನೀವೇ ಹೇಳಿ ಎಂದು ಪ್ರಶ್ನಿಸಿದರು. ಅಲ್ಲದೆ, ಈ ಹಿಂದೆ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿರುವ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳು ಸಮರ್ಪಕವಾಗಿ ಆಗದೆ ಇರುವ ಬಗ್ಗೆ ಸಭೆ ಗಮನಕ್ಕೆ ತಂದಿದ್ದರೂ ಆ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಸಭೆ ಇರುವುದು ಗೊತ್ತಿದ್ದರೂ ಸದಸ್ಯರಿಗೆ ಕೊಡುತ್ತಿಲ್ಲ ಏಕೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

2025-26 ನೇ ಸಾಲಿನಲ್ಲಿ ಹಂಚಿಕೆಯಾಗಿರುವ ಎಸ್‌ಎಫ್‌ಸಿ ಮುಕ್ತ ನಿಧಿಯಡಿ ಎಸ್‌ಸಿಎಸ್‌ಪಿ ಯೋಜನೆಗೆ ಹಂಚಿಕೆಯಾದ 9 ಲಕ್ಷ ರೂ.ಪೈಕಿ 4.68 ಲಕ್ಷ ರೂ.ಗಳಿಗೆ ಸ್ಪಿಲ್ ಓವರ್ ಕಾಮಗಾರಿ ಮಾಡಲು ಹಾಗೂ ಉಳಿಕೆ 4.32 ಲಕ್ಷ ರೂ.ಗಳಿಗೆ ಎಸ್‌ಸಿಎಸ್‌ಪಿ ಯೋಜನೆಯಲ್ಲಿ ಕ್ರಿಯಾ ಯೋಜನೆ ತಯಾರಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು.

ಪುರಸಭೆ ಉಪಾಧ್ಯಕ್ಷ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಮುಖ್ಯಾಧಿಕಾರಿ ಮೀನಾಕ್ಷಿ, ಸದಸ್ಯರು ಇದ್ದರು.