ಜಿಲ್ಲೆ

ಅರಣ್ಯ ಸಚಿವರ ಟಿಪ್ಪಣಿಗೆ ಆಕ್ಷೇಪ

ಉತ್ತರ ಕನ್ನಡ ಡೆಸ್ಕ್

ಶಿರಸಿ: ವಿವಿಧ ಹಂತಗಳಲ್ಲಿ ಬಾಕಿ ಇರುವ ಅರಣ್ಯ ಒತ್ತುವರಿ ತೆರವು ಪ್ರಕರಣ ತ್ವರಿತವಾಗಿ ಕಾಲಮಿತಿಯಲ್ಲಿ ಜರುಗಿಸಲು ರಾಜ್ಯಮಟ್ಟದ ಕಾರ್ಯಪಡೆ ರಚಿಸುವ ಅಭಿಪ್ರಾಯ ವ್ಯಕ್ತಪಡಿಸಿ, ಲಿಖಿತ ಟಿಪ್ಪಣೆಯನ್ನು ಅರಣ್ಯ ಸಚಿವರು ಹಿರಿಯ ಅಧಿಕಾರಿಗಳಿಗೆ ನೀಡಿರುವುದರಿಂದ ಅರಣ್ಯವಾಸಿಗಳಲ್ಲಿ ಆತಂಕ ಉಂಟಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಗುರುವಾರ ಮಾಹಿತಿ ನೀಡಿದ ಅವರು, ಸೆಪ್ಟೆಂಬರ್ 22ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ ನ್ಯಾಯಾಲಯ ಮತ್ತು ಅರಣ್ಯ ಇಲಾಖೆಯಲ್ಲಿನ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲು ಸಂಬಂಧಿಸಿ ಅರಣ್ಯ, ಜೀವಶಾಸತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಟಿಪ್ಪಣೆಯ ಪತ್ರದ ಪ್ರತಿ ಪ್ರದರ್ಶಿಸಿ ಮಾತನಾಡಿದರು.

ಮನಮೋಹನಸಿಂಗ್ ಪ್ರಧಾನಮಂತ್ರಿಯಾಗಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ, ಅರಣ್ಯ ಹಕ್ಕು ಕಾಯ್ದೆ ಅಡಿ ಸಾಗುವಳಿ ಹಕ್ಕಿಗೆ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ನೀಡಬೇಕಾದ ಕಾನೂನು ಬದ್ಧ ರಕ್ಷಣೆ ಹಾಗೂ ಹಕ್ಕಿನ ಕುರಿತು ಉಲ್ಲೇಖಿಸದೆ, ಹಳೆಯ ಅರಣ್ಯ ಒತ್ತುವರಿ ಪ್ರದೇಶದಿಂದ ಒಕ್ಕಲೆಬ್ಬಿಸುವ ಕುರಿತು ಕಾನೂನು ಕ್ರಮ ಬಿಗಿಗೊಳಿಸಲು ನಿರ್ದೇಶನ ನೀಡಿರುವುದು ಹಾಗೂ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿರುವುದು ವಿಷಾದಕರ ಎಂದರು.

ಅರಣ್ಯ ಒತ್ತುವರಿ ಹಾಗೂ ಅರಣ್ಯ ಕಾಯ್ದೆ ಅಡಿ ಇನ್ನಿತರ ಕಾನೂನು ಉಲ್ಲಂಘನೆಗೆ ಸಚಿವರು ಆನ್‌ಲೈನ್ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ದಾಖಲಿಸಲು ಸೂಚನೆ ನೀಡಿರುವುದು ಆಘಾತಕಾರಿ ಬೆಳವಣಿಗೆ ಆಗಿದೆ. ಇದರ ದುರುಪಯೋಗ ಅರಣ್ಯವಾಸಿಗಳ ಮೇಲೆ ಆಗಬಹುದೆಂಬ ಶಂಕೆಯನ್ನ ರವೀಂದ್ರ ನಾಯ್ಕ ವ್ಯಕ್ತಪಡಿಸಿದರು.

ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ಎಂ.ಆರ್. ನಾಯ್ಕ ಕಂಡ್ರಾಜಿ, ರಾಜು ನರೇಬೈಲ್ ಉಪಸ್ಥಿತರಿದ್ದರು.