ಆರ್.ತುಳಸಿಕುಮಾರ್
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸದಿದ್ದರೂ, ನಾಗರಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಸಿ.ಎ. ಸೈಟ್‌ಗಳ ವಿಲೇವಾರಿಗೆ ಅತ್ಯುತ್ಸಾಹ ತೋರಿಸಲಾಗುತ್ತಿದೆ. ಪ್ರಾಧಿಕಾರದ ಈ ಕ್ರಮಕ್ಕೆ ಸೈಟ್‌ದಾರರು ಹಾಗೂ ಪರಿಹಾರದ ಸೈಟ್‌ಗಾಗಿ ಕಾಯುತ್ತಿರುವ ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಏಳು ವರ್ಷದ ಹಿಂದೆಯೇ ಬಡಾವಣೆ ರಚನೆ ಕಾರ್ಯ ಕೈಗೆತ್ತಿಕೊಂಡಿದ್ದರೂ, ಹಲವು ಕಾಮಗಾರಿ ಪೂರ್ಣಗೊಳ್ಳದೆ ಬಾಕಿ ಉಳಿಸಿಕೊಳ್ಳಲಾಗಿದೆ. ಭೂಸ್ವಾಧೀನ ವಿಳಂಬ ಹಾಗೂ ಹಣದ ಕೊರತೆ ಮುಂದಿಟ್ಟು ಮೂಲಸೌಕರ್ಯ ಒದಗಿಸುವ ಡೆಡ್‌ಲೈನ್ ವಿಸ್ತರಿಸುತ್ತಾ ಬರಲಾಗಿದೆ. ನಗರಾಭಿವೃದ್ಧಿ ಇಲಾಖೆ, ರೇರಾ, ವಿಧಾನಮಂಡಲದ ಅರ್ಜಿ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿರುವ ಬಿಡಿಎ, ಕೆಂಪೇಗೌಡ ಲೇಔಟ್ ಅನ್ನು ವಾಸಯೋಗ್ಯ ಪ್ರದೇಶವನ್ನಾಗಿಸಲು ವಿಲವಾಗಿದೆ. ವಸ್ತುಸ್ಥಿತಿ ಹೀಗಿದ್ದರೂ, ಅಪೂರ್ಣ ಬಡಾವಣೆಯಲ್ಲಿನ ಸಿ.ಎ. ಸೈಟ್‌ಗಳನ್ನು ಏತಕ್ಕಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂಬ ನಾಗರಿಕರ ಪ್ರಶ್ನೆಗೆ ಪ್ರಾಧಿಕಾರ ಜಾಣಕಿವುಡು ವಹಿಸಿದಂತಿದೆ.
ಅಧಿಸೂಚನೆಗೆ ಅತ್ಯುತ್ಸಾಹ:
ಬಿಡಿಎ ಮಂಗಳವಾರ (ಏ.8) ತಾನು ರಚಿಸಿರುವ ವಿವಿಧ ಬಡಾವಣೆಗಳಲ್ಲಿನ ಒಟ್ಟು 94 ಸಿ.ಎ. ಸೈಟ್‌ಗಳನ್ನು ವಿಲೇವಾರಿ ಮಾಡಲು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ 59 ಸಂಖ್ಯೆಯಷ್ಟು ಕೆಂಪೇಗೌಡ ಲೇಔಟ್‌ಗೆ ಸೇರಿದ್ದಾಗಿದೆ. ಉಳಿದವು ವಿಶ್ವೇಶ್ವರಯ್ಯ ಲೇಔಟ್ ಬನಶಂಕರಿ ಲೇಔಟ್, ಕಾರಂತ ಬಡಾವಣೆ ಇತ್ಯಾದಿ ಸೇರಿವೆ. ಕೆಂಪೇಗೌಡ ಬಡಾವಣೆಯಲ್ಲಿನ ಸಿ.ಎ. ಸೈಟ್‌ಗಳ ವಿಲೇವಾರಿಗೆ 2019ರ ಫೆ.2 ಹಾಗೂ 2022ರ ಮೇ 5ರಂದು ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದು, ಈವರೆಗೆ ಒಟ್ಟು 90 ನಿವೇಶನಗಳನ್ನು ವಿಲೇವಾರಿ ಮಾಡಿದಂತಾಗಿದೆ.
ಬಿಡಿಎ 1989ರ ಸಿ.ಎ. ನಿಯಮಾವಳಿ ಪ್ರಕಾರ ಇಂತಹ ಸೈಟ್‌ಅನ್ನು ನಿರ್ದಿಷ್ಟ ಉದ್ದೇಶಕ್ಕೆ 30 ವರ್ಷ ಗುತ್ತಿಗೆ ನೀಡಲಾಗುತ್ತದೆ. ಹಂಚಿಕೆ ಸಮಯದಲ್ಲಿ ಆಯಾ ಬಡಾವಣೆಯಲ್ಲಿನ ಮಾರ್ಗಸೂಚಿ ದರ ಆಧರಿಸಿ ಹಾಗೂ ವಾರ್ಷಿಕ ಗುತ್ತಿಗೆ ಹಣ ಪಾವತಿಸಿಕೊಂಡು ವಿಲೇವಾರಿ ಮಾಡಲಾಗುತ್ತದೆ. ಈ ರೀತಿ ಹಂಚಿಕೆಯಾದ ಸಿ.ಎ. ಸೈಟ್‌ಅನ್ನು ಪಡೆದ ಸಂಘ-ಸಂಸ್ಥೆಗಳು 3 ವರ್ಷದೊಳಗೆ ಬಳಸಿಕೊಳ್ಳಬೇಕು. ದಂಡದ ಮೊತ್ತ ಪಾವತಿಸಿ 5 ವರ್ಷದೊಳಗೆ ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಇದೆ. ತಪ್ಪಿದ್ದಲ್ಲಿ ಸಿ.ಎ. ಸೈಟ್ ವಾಪಸ್ ಪಡೆಯಲಾಗುತ್ತದೆ.
ಕೆಂಪೇಗೌಡ ಲೇಔಟ್ ಪ್ರಕರಣದಲ್ಲಿ 2022ರಲ್ಲೇ ಹಂಚಿಕೆ ಮಾಡಿರುವ ಸಿ.ಎ. ಸೈಟ್ ಸದ್ಯ ಯಾವ ಸಂಸ್ಥೆಯೂ ಕಟ್ಟಡ ನಿರ್ಮಿಸಿ ಬಳಕೆ ಮಾಡಿಲ್ಲ. ಪ್ರಾಧಿಕಾರದ ನಿಯಮದಂತೆ ಗಡುವಿನೊಳಗೆ ಸದ್ಬಳಕೆ ಮಾಡಿಕೊಳ್ಳದ ಕಾರಣ ಅಂತಹ ಸೈಟ್‌ಗಳನ್ನು ವಾಪಸ್ ಪಡೆಯುವ ಗೋಜಿಗೆ ಹೋಗಿಲ್ಲ. ಸೌಕರ್ಯ ಕಲ್ಪಿಸದ ಕಾರಣ ಒಂದಿಷ್ಟು ದಿನ ಹೆಚ್ಚುವರಿ ಸಮಯ ನೀಡುವುದಾಗಿ ಹೇಳುವ ಪ್ರಾಧಿಕಾರವು, ಬಡಾವಣೆ ಪೂರ್ಣಗೊಂಡ ಬಳಿಕವೇ ವಿಲೇವಾರಿ ಮಾಡಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸುತ್ತಿಲ್ಲ. ಮೂಲಸೌಕರ್ಯ ಕಲ್ಪಿಸಿದ ಬಳಿಕ ವಿಲೇವಾರಿ ಮಾಡಿದ್ದಲ್ಲಿ ಹಾಲಿ ದರದಂತೆ ಹಂಚಿಕೆ ಮಾಡಿದ್ದಲ್ಲಿ ಹೆಚ್ಚಿನ ಆದಾಯ ಬರುತ್ತಿತ್ತು. ಅಧಿಕಾರಿಗಳ ತಪ್ಪು ನಿರ್ಧಾರದಿಂದ ಪ್ರಾಧಿಕಾರಕ್ಕೆ ಕೋಟ್ಯಂತರ ರೂ. ನಷ್ಟ ಆಗಿದೆ ಎಂಬ ಆಕ್ಷೇಪ ಕೇಳಿಬಂದಿದೆ.
ಭೂ ಬಳಕೆ ಬದಲಾವಣೆ ತಂದ ಇಕ್ಕಟ್ಟು:
ಯಾವುದೇ ಬಡಾವಣೆಯ ಒಟ್ಟು ಪ್ರದೇಶದಲ್ಲಿ ಸಿ.ಎ. ಸೈಟ್‌ಗೆ ಶೇ.10 ಹಾಗೂ ಆಟದ ಮೈದಾನ/ಮುಕ್ತ ಜಾಗ/ಪಾರ್ಕ್ ಉದ್ದೇಶಕ್ಕೆ ಶೇ.15 ಜಾಗ ಮೀಸಲಿಡುವುದು ಕಡ್ಡಾಯ. ಕೆಂಪೇಗೌಡ ಲೇಔಟ್ ಅನ್ನು 4,043 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸುತ್ತಿದ್ದು, ಸಿ.ಎ. ಉದ್ದೇಶಕ್ಕೆ 387 ಎಕರೆ 20 ಗುಂಟೆ ಮೀಸಲಿಡಲಾಗಿದೆ. ಆಧರೆ, ಭೂಸ್ವಾಧೀನ ಸಮಸ್ಯೆಯಿಂದ 2,694 ಎಕರೆ 24 ಗುಂಟೆ ಪ್ರದೇಶದಲ್ಲಿ ಲೇಔಟ್ ಅಭಿವೃದ್ಧಿಪಡಿಸುತ್ತಿರುವ ಕಾರಣ 232 ಎಕರೆ 2 ಗುಂಟೆಯಲ್ಲಿ 177 ಸಿ.ಎ. ಸೈಟ್ ರಚಿಸಬೇಕಿದ್ದು, ಸದ್ಯ 107ಅನ್ನು ರಚಿಸಲಾಗಿದೆ. ಈ ಪೈಕಿ 90ಅನ್ನು ವಿಲೇವಾರಿಗೆ ಅಧಿಸೂಚನೆ ಮಾಡಲಾಗಿದೆ. ವಿಶೇಷವೆಂದರೆ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆಯಿಂದ ಒಪ್ಪಿಗೆ ಪಡೆಯದೆ 64 ಎಕರೆಯನ್ನು (94 ಸಿ.ಎ. ಸೈಟ್) ವಸತಿ ಪ್ರದೇಶಕ್ಕೆ ಮಾರ್ಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ವಿಧಾನಮಂಡಲದ ಅರ್ಜಿ ಸಮಿತಿಗೆ ದೂರು ದಾಖಲಾಗಿ, ಪ್ರಾಧಿಕಾರ ನಡೆಗೆ ವಿರೋಧ ವ್ಯಕ್ತವಾಗಿತ್ತು. ಈ ತಪ್ಪನ್ನು ನಂತರದಲ್ಲಿ ತಿದ್ದಿಕೊಳ್ಳುವುದಾಗಿ ಬಿಡಿಎ ಮುಖ್ಯಸ್ಥರು ಭರವಸೆ ನೀಡಿದ್ದರೂ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.
ತಡೆಯಾಜ್ಞೆ ಇದ್ದರೂ ಹಂಚಿಕೆ ಸರಿಯೇ?:
ಕಾರಂತ ಬಡಾವಣೆಯಲ್ಲಿ ಸೈಟ್ ಹಂಚಿಕೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೂ ಪ್ರಾಧಿಕಾರವು ಈ ಲೇಔಟ್‌ನ 4 ಸಿ.ಎ. ಸೈಟ್‌ಗಳನ್ನು ವಿಲೇವಾರಿ ಮಾಡಲು ಅಧಿಸೂಚನೆ ಹೊರಡಿಸಿದೆ. ತಡೆಯಾಜ್ಞೆಯು ಸಾರ್ವಜನಿಕರು, ರೈತರ ಪರಿಹಾರದ ಸೈಟ್‌ಗೆ ಸೇರಿ ಎಲ್ಲ ಬಗೆಯ ಹಂಚಿಕೆಗೆ ಅನ್ವಯವಾಗುತ್ತದೆ. ಆದರೆ, ಬಿಡಿಎ ಅಧಿಕಾರಿಗಳು ಈ ಆದೇಶ ಪಾಲಿಸದೆ ಸಿ.ಎ. ಸೈಟ್‌ಗಳನ್ನು ವಿಲೇವಾರಿ ಮಾಡಲು ಮುಂದಾಗಿರುವುದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ.
ಕೆಂಪೇಗೌಡ ಲೇಔಟ್‌ನಲ್ಲಿ ಗಡುವಿನೊಳಗೆ ಕಾಮಗಾರಿ ಪೂರ್ಣವಾಗದ ಕಾರಣ ಸೈಟ್‌ದಾರರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಾರ್ಕ್, ಪ್ಲೇಗ್ರೌಂಡ್ ಹಾಗೂ ಸಿ.ಎ. ಸೈಟ್‌ಗಳಿಗೆ ನಿಗದಿ ಜಾಗ ಮೀಸಲಿಡ ಕಾರಣ ನಾಗರಿಕ ಸೌಲಭ್ಯವೂ ಮರೀಚಿಕೆಯಾಗಿದೆ. ಪ್ರಾಧಿಕಾರ ನಿಯಮದಂತೆ ಬಡಾವಣೆ ರಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ.
- ಸೂರ್ಯಕಿರಣ್, ಎನ್‌ಪಿಕೆಎಲ್ ವೇದಿಕೆಯ ಪದಾಧಿಕಾರಿ