ಮೈಸೂರು: ನಗರದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಾಲಾ, ಕಾಲೇಜುಗಳಲ್ಲಿ ಗುರುವಾರ ರಾಷ್ಟ್ರಕವಿ ಕುವೆಂಪು ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿವಿಧೆಡೆ ಇರುವ ಕುವೆಂಪು ಪ್ರತಿಮೆಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.
ಮೈಸೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಕೀಲರ ಬಳಗದ ವತಿಯಿಂದ ಮಾನಸ ಗಂಗೋತ್ರಿ ಪ್ರವೇಶ ದ್ವಾರದಲ್ಲಿನ ಕುವೆಂಪು ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಎ.ಸಿ.ಮಂಜುನಾಥ್, ಆರ್.ಗಿರಿಜೇಶ್, ಹರದೂರು ಜವರೇಗೌಡ, ಎನ್.ಲೋಹಿತ್, ಲೋಕೇಶ್, ಗೋಪಾಲೇಗೌಡ, ಅನಿಲ್ ಇತರರಿದ್ದರು.
ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮೇಯರ್ ಶಿವಕುಮಾರ್, ಸಂಘದ ಅಧ್ಯಕ್ಷ ಜಯನಗರ ಮಹೇಶ್, ಉಪಾಧ್ಯಕ್ಷ ಎಂ.ಎಸ್.ಸುರೇಶ್‌ಕುಮಾರ್, ಕಾರ್ಯದರ್ಶಿ ರವಿಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಪಳನಿ, ಖಜಾಂಚಿ ಪ್ರಕಾಶ್ ನಿರ್ದೇಶಕರಾದ ಅನಿಲ್, ಚಂದ್ರೇಗೌಡ, ಯೋಗೇಶ್ ಇತರರಿದ್ದರು.
ವಾಣಿ ವಿದ್ಯಾಮಂದಿರ, ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ವತಿಯಿಂದ ವಿದ್ಯಾರಣ್ಯಪುರಂನ ವಾಣಿ ವಿದ್ಯಾಮಂದಿರದಲ್ಲಿ ವಿಶ್ವ ಮಾನವ ದಿನ ಆಚರಿಸಲಾಯಿತು. ಮಂದಿರದ ಆಡಳಿತಾಧಿಕಾರಿ ಎಚ್.ಕೆ.ರಾಘವೇಂದ್ರರಾವ್, ಸಾಹಿತಿ ಬನ್ನೂರು ಕೆ.ರಾಜು, ಮುಕ್ತಕ ಕವಿ ಮುತ್ತು ಸ್ವಾಮಿ ಇತರರಿದ್ದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಖಿಲ್ಲೆ ಮೊಹಲ್ಲಾದ ಶ್ರೀ ನಟರಾಜ ಸಭಾಭವನದಲ್ಲಿ ವಿಶ್ವ ಮಾನವ ದಿನಾಚರಣೆ ಮತ್ತು ಗೀತ ಗಾಯನ ಕಾರ್ಯಕ್ರಮ ನೆರವೇರಿತು. ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಇದ್ದರು. ಪ್ರೊ.ಎಸ್.ಮಲ್ಲಣ್ಣ, ದಿವ್ಯಶ್ರೀ, ಪ್ರಸನ್ನಕುಮಾರ್ ವೃಂದ ಗೀತ ಗಾಯನ ನಡೆಸಿಕೊಟ್ಟರು.
ಸಿಹಿ ವಿತರಣೆ: ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಗನ್‌ಹೌಸ್ ವೃತ್ತದಲ್ಲಿರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಮಾಜಿ ಮೇಯರ್ ಸಂದೇಶ ಸ್ವಾಮಿ ಮಾತನಾಡಿ, ಕುವೆಂಪು ಅವರು ನಾಡಗೀತೆಯನ್ನು ರಚಿಸಿ, ಸಾಮರಸ್ಯ ಸಂದೇಶ ಸಾರಿದ್ದಾರೆ. ಹೀಗಾಗಿ, ಎಲ್ಲ ಧರ್ಮದವರೂ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿ ಹೇಳಿದರು.
ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ಖ್ಯಾತ ಶಿಲ್ಪಿ ಅರುಣ್, ನಗರಪಾಲಿಕೆ ಸದಸ್ಯ ಜಗದೀಶ್, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಸಂಚಾಲಕ ಮುರುಳಿ, ನರಸಿಂಹರಾಜ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಇತರರಿದ್ದರು.
ಒಕ್ಕಲಿಗರ ಮಹಾಸಭಾ: ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ ಸಂಘದ ಕಚೇರಿಯಲ್ಲಿ ಕುವೆಂಪು ಜಯಂತಿಯನ್ನು ಸರಳವಾಗಿ ಆಚರಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿದರು. ಮಹಾಸಭಾದ ಅಧ್ಯಕ್ಷ ಎನ್.ಬೆಟ್ಟೇಗೌಡ, ಕಸಾಪದ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಎಂ.ಚಂದ್ರಶೇಖರ, ಕಸಾಪ ನಗರ ಅಧ್ಯಕ್ಷ ಶಿವರಾಮು, ಸಮಾಜ ಸೇವಕರಾದ ಡಾ.ರಘುರಾಮ್ ವಾಜಪೇಯಿ, ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎಂ. ರಾಮಕೃಷ್ಣ ಇತರರಿದ್ದರು.
ಗಂಗೋತ್ರಿ ಪಬ್ಲಿಕ್ ಶಾಲೆ: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಕುವೆಂಪು ಜಯಂತಿ ಆಚರಿಸಲಾಯಿತು. ವಿದ್ಯಾರ್ಥಿಗಳು ಕುವೆಂಪು ರಚನೆಯ ಭಾವಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು. ಶಾಲಾ ಆಡಳಿತಾಧಿಕಾರಿ ಕಾಂತಿ ನಾಯಕ್ ಮಾತನಾಡಿದರು. ಶಿಕ್ಷಕರಾದ ಮಹಮದ್ ಫಾರೂಕ್, ವಿಜಯಲಕ್ಷ್ಮೀ ಇತರರಿದ್ದರು.