ಜಿಲ್ಲೆ

ಓಬಿಸಿ ಹಕ್ಕೊತ್ತಾಯಕ್ಕೆ ಆ.14 ರಂದು ವೀರಶೈವ ಲಿಂಗಾಯತ ಒಳಪಂಗಡಗಳ ಸಮಾವೇಶ

Gadag - Shivanand Hiremath

ಗದಗ

ಸಮಸ್ತ ವೀರಶೈವ ಮಠಾಧೀಶರ ವೇದಿಕೆ ಮತ್ತು ವೀರಶೈವ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ ರಾಜ್ಯಾದ್ಯಂತ ಸಮುದಾಯದ ಒಳಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯಿಸಲು ಆ.14 ರಂದು ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಎಲ್ಲ ಮಠಾಧೀಶರ ಸಮಾವೇಶ ನಡೆಸಲಾಗುವುದು ಎಂದು ನಿವೃತ್ತ ಮಾಹಿತಿ ಆಯೋಗದ ಅಧ್ಯಕ್ಷ ಶೇಖರ ಸಜ್ಜನರ ಹೇಳಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1990 ರಲ್ಲಿ ಮಂಡಲ ಆಯೋಗದಲ್ಲಿ ಒಬಿಸಿ ಸೃಷ್ಟಿಸಲಾಯಿತು. ಅಂದು ವಿಪಿ ಸಿಂಗ್ ಅವರು ಶೇ. 28 ರಷ್ಟು ಒಬಿಸಿ ಗೆ ಮೀಸಲಾತಿ ನೀಡಿದ್ದರು. ದೇಶದಲ್ಲಿ 26050 ಒಳಪಂಗಡ, ರಾಜ್ಯದಲ್ಲಿ 199 ಒಳಪಂಗಡಗಳು ಒಬಿಸಿ ಮೀಸಲು ಲಾಭ ಪಡೆದಿವೆ. ಲಿಂಗಾಯತರಲ್ಲಿ 17 ಒಳಪಂಗಡಗಳು ಒಬಿಸಿಯಲ್ಲಿದ್ದು, ಎಲ್ಲ ಲಿಂಗಾಯತ ಒಳಪಂಗಡಗಳು ಒಬಿಸಿಯಲ್ಲಿ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದರು.

ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ವೀರಶೈವ ಲಿಂಗಾಯತ ಪಂಗಡಗಳಿದ್ದು, ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಒಬಿಸಿ ಮೀಸಲಾತಿಯಿಂದ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಅವಕಾಶ ಸಿಗುತ್ತದೆ. ಉದ್ಯೊಗದ ವಯಸ್ಸಿನ ಮಿತಿ ಸಡಿಲಿಸಲಾಗಿದೆ ಎಂದರು.

ಪ್ರತಿವರ್ಷ 185 ಐಎಎಸ್ ಅಧಿಕಾರಿಗಳನ್ನು ಸರ್ಕಾರ ಭರ್ತಿ ಮಾಡಲಾಗುತ್ತದೆ. ಒಬಿಸಿ ಮೀಸಲಾತಿಯಿಂದ ಕಡಿಮೆ ರ್ಯಾಂಕ್ ಪಡೆದ ಅಭ್ಯರ್ಥಿ ಉತ್ತಪ ಹುದ್ದೆ ಸಿಗಬಹುದು. ನವೋದಯ, ನೀಟ್ , ವೈದ್ಯಕೀಯ ಕಾಲೇಜ್ ಗಳಲ್ಲಿ ಸಿಗುವ ಮೀಸಲು ಸಡಿಲಿಕೆಯಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಅನುಕೂಲ ಆಗಲಿದೆ ಎಂದು ಶೇಖರ ಸಜ್ಜನರ ಹೇಳಿದರು.

ವಿ.ಕೆ. ಗುರುಮಠ, ಚಂದ್ರು ಬಾಳಿಹಳ್ಳಿಮಠ, ಈಶಣ್ಣ ಮುನವಳ್ಳಿ, ರಾಜಣ್ಣ ಮಲ್ಲಾಡದ, ಮಂಜುನಾಥ ಬೇಲೆರಿ, ಈರಣ್ಣ ಕರೀಬಿಷ್ಠಿ. ಕೆ.ಕೆ. ಮಳಗೌಡರ ಇತರರು ಇದ್ದರು.