ಜಿಲ್ಲೆ

ಕುಂಚಿಟಿಗರಿಗೆ ಒಬಿಸಿ ಮೀಸಲು ಎಚ್ಡಿಕೆ ಒಲವು

ತುಮಕೂರು/ಶಿರಾ : ಕೇಂದ್ರ ನೂತನ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಜಿಲ್ಲೆಗೆ ಭೇಟಿ ನೀಡಿದ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಅದ್ದೂರಿಯಾಗಿ ಜೆಡಿಎಸ್​&ಬಿಜೆಪಿ ಕಾರ್ಯಕರ್ತರ ಬರಮಾಡಿಕೊಂಡರು. ಕೊಬ್ಬರಿ ಹಾರ ಹಾಕಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ಸಿದ್ದಗಂಗಾಮಠ, ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿದ ಎಚ್ಡಿಕೆಗೆ ತುಮಕೂರಿನಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಬಟವಾಡಿ ವೃತ್ತದಿಂದ ಜೆಡಿಎಸ್​ ಜಿಲ್ಲಾ ಕಚೇರಿವರೆಗೆ ಉಭಯ ಪಕ್ಷಗಳ ಕಾರ್ಯಕರ್ತರು ಬೈಕ್​, ಕಾರು ರ್ಯಾಲಿ ಮೂಲಕ ತೆರೆದ ವಾಹನದಲ್ಲಿ ಎಚ್ಡಿಕೆ ಮೆರವಣಿಗೆಯಲ್ಲಿ ಕರೆತರಲಾಯಿತು.

ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಕ್ಕೆ ಸೋಮವಾರ ಭೇಟಿ ನೀಡಿ ಶ್ರೀ ಓಂಕಾರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಶ್ರೀ ನಂಜಾವಧೂತ ಸ್ವಾಮೀಜಿ ಆರ್ಶೀವಾದ ಪಡೆದ ಬಳಿಕ ಮಾತನಾಡಿದ ಎಚ್ಡಿಕೆ, ಕುಂಚಿಟಿಗ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡತ್ತೇನೆ ಎಂದು ಭರವಸೆಯಿತ್ತರು.

ಕೇಂದ್ರದ ಎನ್​ಡಿಎ ಸರ್ಕಾರದಲ್ಲಿ ನಾನು ಕೃಷಿ ಸಚಿವನಾಗದಿದ್ದರು ಸಹ ರಾಜ್ಯದ ರೈತರ ಏಳಿಗೆಗಾಗಿ ಶ್ರಮಿಸುತ್ತೇನೆ. ಈಗಾಗಲೇ ಎಚ್​.ಡಿ.ದೇವೇಗೌಡರು ಕಾಡುಗೊಲ್ಲರಿಗೆ ಎಸ್​.ಟಿ ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದು, ನಾನು ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕಾಡುಗೊಲ್ಲರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಜೆಡಿಎಸ್​ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ, ಶಾಸಕ ಸಿ.ಬಿ. ಸುರೇಶ್​ ಬಾಬು, ವಿಧಾನ ಪರಿಷತ್​ ಸದಸ್ಯರಾದ ಚಿದಾನಂದ ಎಂ ಗೌಡ, ಕೆ.ಎ.ತಿಪ್ಪೇಸ್ವಾಮಿ, ಜೆಡಿಎಸ್​ ರಾಜ್ಯ ಪರಿಷತ್​ ಸದಸ್ಯ ಆರ್​.ಉಗ್ರೇಶ್​, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಮಾಜಿ ಶಾಸಕರಾದ ವೀರಭದ್ರಪ್ಪ, ಸುಧಾಕರ್​ ಲಾಲ್​, ತಿಮ್ಮರಾಯಪ್ಪ, ಮಾಜಿ ವಿಧಾನ ಪರಿಷತ್​ ಸದಸ್ಯ ಚೌಡರೆಡ್ಡಿ, ಮಾಜಿ ಸಚಿವ ಶಿವಣ್ಣ, ತಾಲೂಕು ಜೆಡಿಎಸ್​ ಅಧ್ಯಕ್ಷ ಸತ್ಯ ಪ್ರಕಾಶ್​, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್​. ರಾಮಕೃಷ್ಣ, ಎಸ್​. ಆರ್​. ಗೌಡ ಮತ್ತಿತರರು ಉಪಸ್ಥಿತರಿದ್ದರು.