ಹುಣಸೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಸಮಾರಂಭದಲ್ಲಿ ಗಣ್ಯರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶ್ರೀಪಾದ್, ಜಯರಾಂ, ನಿಂಗರಾಜ ಮಲ್ಲಾಡಿ, ಡಿ.ಕೆ.ಕುನ್ನೇಗೌಡ ಇದ್ದರು. 
ಜಿಲ್ಲೆ

ಓಬವ್ವ ಸಾಹಸ ಸಮಾಜಕ್ಕೆ ಮಾದರಿ

ಅಭಿನಯ್ ಎಚ್.ಎಂ

ಹುಣಸೂರು:  ತನಗೆ ಆಶ್ರಯ, ಅನ್ನ ನೀಡಿದ ರಾಜ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ರಕ್ಷಿಸಿದ ವೀರ ವನಿತೆ ಒನಕೆ ಓಬವ್ವ ಎಂದು ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿಯಲ್ಲಿ ಮಾತನಾಡಿದರು.

ಅಂದಿನ ಕಾಲಘಟ್ಟದಲ್ಲಿ ಮಹಿಳೆಯರು ಹೊರಬರುವುದೇ ದುಸ್ತರವಾಗಿತ್ತು. ಆದರೆ ಒನಕೆ ಓಬವ್ಬ ಇಡೀ ಚಿತ್ರದುರ್ಗ ಕೋಟೆಯನ್ನೇ ಹೈದರಾಲಿ ಸೈನ್ಯದ ದಾಳಿಯಿಂದ ರಕ್ಷಿಸುವ ಮೂಲಕ ತನ್ನ ನೆಲದ ಪ್ರೀತಿಯ ಪರಾಕಾಷ್ಠೆ ತೋರಿದರು. ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂಬುದನ್ನು ಅಂದಿನ ಕಾಲದಲ್ಲೇ ಓಬವ್ವ ತೋರಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.

ರಂಗಕಲಾವಿದ ಜಯರಾಂ ಮಾತನಾಡಿ, ನಾಡು, ನುಡಿ ಭಾಷೆಗಾಗಿ ಹೋರಾಡಿದ ಧೀರ ಮಹಿಳೆ ಒನಕೆ ಓಬವ್ವ ಎಂದು ಬಣ್ಣಿಸಿದರು.

ಶಿರಸ್ತೇದಾರ್ ಶ್ರೀಪಾದ್ ನಾಲವತ್ತವಾಡಕರ್ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡರಾದ ನಿಂಗರಾಜ ಮಲ್ಲಾಡಿ, ಡಿ.ಕುಮಾರ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ವಾಸೇಗೌಡ, ಕಾಯಕ ಸಮಾಜಗಳ ತಾಲೂಕು ಅಧ್ಯಕ್ಷ ಹೊನ್ನಪ್ಪ, ಎ.ಪಿ.ಸ್ವಾಮಿ, ಸೀರೇನಹಳ್ಳಿ ಬಸವರಾಜು, ನಗರಸಭೆ ಪೌರಾಯುಕ್ತೆ ಕೆ.ಮಾನಸ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್.ರಾಚಪ್ಪ, ಸುಬ್ಬರಾವ್ ಮತ್ತಿತರ ಗಣ್ಯರು ಹಾಜರಿದ್ದರು.